ಕೋಲಾರ : ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದ ನಮ್ಮೆಲ್ಲರ ಜೀವನ ನಡೆಯುತ್ತಿದೆ ಎಂದು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ಹೇಳಿದರು.
ಕೋಲಾರ ಸರ್ಕಾರಿ ಪ್ರೌಢಶಾಲೆ ಅಣ್ಣಿಹಳ್ಳಿಯಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಿಕ್ಷಕಿ ಉಮಾದೇವಿ ಮಾತನಾಡಿ, ಅಲ್ಲಲ್ಲಿ ಹಂಚಿಹೋಗಿದ್ದ ಭಾರತೀಯ ಪ್ರಾಂತ್ಯಗಳನ್ನು ಒಂದೂಗೂಡಿಸಿ, ಭಾರತಕ್ಕೆ ಸುಂದರವಾದ ಬೃಹತ್ ಸಂವಿಧಾನ ರಚನೆಯಾಗಿದೆ. ಇದಕ್ಕೆ ಕಾರಣರಾದ ಎಲ್ಲರನ್ನೂ ಸ್ಮರಿಸಬೇಕು ಎಂದರು.
ಹಳೆಯ ವಿದ್ಯಾರ್ಥಿ ಹೇಮಂತ್.ಎಂ ಮಾತನಾಡಿ, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಆದ್ದರಿಂದ ಸಂವಿಧಾನ ರಚನೆಯ ಇತಿಹಾಸವನ್ನು ತಿಳಿಸಿ, ಇಂದು ಸಮಾನತೆಯಿಂದ ಎಲ್ಲರು ಬಾಳಲು ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್ ರವರು. ಅವರು ಓದುವ ಎಲ್ಲರಿಗೂ ಸ್ಫೂರ್ತಿ. ಸಂವಿಧಾನದ ರಚನೆಗಾಗಿ ತಮ್ಮ ಆರೋಗ್ಯವನ್ನೇ ಕಳೆದುಕೊಂಡ ಮಹಾನಾಯಕ. ಅವರ ತ್ಯಾಗವನ್ನು ಎಲ್ಲರೂ ಸ್ಮರಿಸಲೇಬೇಕು ಎಂದರು.
ಶಿಕ್ಷಕಿ ಲತಾ.ಎಸ್ ಮಾತನಾಡಿ, ದೇಶದ ಹೃದಯವೆಂದೆ ಕರೆಯಬಹುದಾದ ಭಾರತದ ಸಂವಿಧಾನವು ನಮ್ಮ ದೇಶದ ಮೂಲಭೂತ ಕಾನೂನು. 75 ವರ್ಷಗಳ ಹಿಂದೆ ರಚನೆಯಾದ ಕೈಬರಹದ ಭಾರತದ ಸಂವಿಧಾನವು ಇಂದಿಗೂ ದೆಹಲಿಯ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಇನ್ನೂ ಸುರಕ್ಷಿತವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಬಿ.ಎಂ.ಪುಷ್ಪರವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಶಾಲಾ ಬೋಧಕರಾದ ಕಲ್ಪಲತಾ, ವಿ.ಎನ್.ಸುಬ್ರಮಣಿ, ಲೋಕೇಶ್, ಮಂಜುಳಾ, ಶುಭಮಂಗಳ, ಸಿಬ್ಬಂದಿಗಳಾದ ಮಂಜಮ್ಮ, ಲಕ್ಷಮ್ಮ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.