ಕರಾವಳಿ ಮತ್ತು ಮಲೆನಾಡು ಭಾಗದ ಅಡಿಕೆ ಬೆಳೆಗಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿರುವ ಬಿಳಿ ಚುಕ್ಕಿ ರೋಗಕ್ಕೆ ಔಷಧಿ ಸಿಂಪಡಿಸಲು ತುರ್ತಾಗಿ 10 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆ ನಗುಸಿಟಿಯಲ್ಲಿ ಇಂದು ಸಂಜೆ ಆಯೋಜಿಸಲಾದ ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳಿಸಲಾಗುತ್ತಿರುವ ಮನೆ ಮನೆಗೆ ಕುಡಿಯುವ ನೀರು ಯೋಜನೆ, ಮರವಂತೆ ಮೀನುಗಾರಿಕಾ ಬಂದರು, ಏತ ನೀರಾವರಿ ಯೋಜನೆ ಸಹಿತ 1591 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಕೆಲವು ಯೋಜನೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತಿದ್ದರು.
ತಾನು ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಘೋಷಿಸಿದ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು, ಇದೀಗ ಕರಾವಳಿಯ ಮೀನುಗಾರರ ಮಕ್ಕಳಿಗೂ ವಿಸ್ತರಿಸಿದ್ದು, ರಾಜ್ಯದ ಮೀನುಗಾರ ಕುಟುಂಬದ 2 ಲಕ್ಷ ಮಕ್ಕಳಿಗೂ ವಿದ್ಯಾನಿಧಿಯನ್ನು ಪೂರ್ಣಪ್ರಮಾಣದಲ್ಲಿ ನೀಡಲಿದ್ದೇವೆ. ಇದರಿಂದ ಮೀನುಗಾರ ಮಕ್ಕಳಿಗೂ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ನೀಡಲು ಬದ್ಧರಾಗಿದ್ದೇವೆ ಎಂದರು.
ಸಾಮಾಜಿಕ ನ್ಯಾಯ ಎಂಬುದು ಈವರೆಗೆ ಭಾಷಣದ ಸರಕಾಗಿತ್ತು. ನಾವಿದ್ದನ್ನು ನಿಜವಾದ ಅರ್ಥದಲ್ಲಿ ಜಾರಿಗೆ ತಂದು ಅನುಷ್ಠಾನಗೊಳಿಸಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿಶೇಷ ಅನುದಾನ ನೀಡಿದ್ದೇವೆ. 100 ಅಂಬೇಡ್ಕರ್ ಹಾಸ್ಟೆಲ್‌ಗಳನ್ನು, 50 ಕನಕದಾಸ ಹಿಂದುಳಿದ ಹಾಸ್ಟೆಲ್ ಪ್ರಾರಂಭಿಸಿದ್ದಲ್ಲದೇ, ಮಂಗಳೂರಿನಲ್ಲಿ 1000 ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೇ ರೀತಿ ವಿದ್ಯಾರ್ಥಿನಿಲಯಗಳನ್ನು ಬೆಂಗಳೂರು, ಹುಬ್ಬಳ್ಳಿ, ಕಲುಬುರ್ಗಿಯಲ್ಲಿ ನಿರ್ಮಿಸಲಿದ್ದೇವೆ ಎಂದರು.
ನಮ್ಮ ವಿವಿಧ ಯೋಜನೆಗಳನ್ನು ಯಶಸ್ವಿ ಅನುಷ್ಠಾನದ ಮೂಲಕ ‘ದುಡ್ಡೇ ದೊಡ್ಡಪ್ಪ ಅಲ್ಲ; ದುಡಿಮೆಯೇ ದೊಡ್ಡಪ್ಪ’ ಎಂಬುದನ್ನು ನಾವು ತೋರಿಸಿಕೊ ಟ್ಟಿದ್ದೇವೆ ಎಂದು ಹೇಳಿದ ಬಸವರಾಜ ಬೊಮ್ಮಾಯಿ, ಇತ್ತೀಚಿನ ಜಿಮ್ ಸಮಾವೇಶದಲ್ಲಿ ಒಟ್ಟು 9.5 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗಿದ್ದು, ಇದರಲ್ಲಿ ಎರಡು ಲಕ್ಷ ಕೋಟಿ ರೂ.ಕರಾವಳಿ ಪ್ರದೇಶಗಳಲ್ಲೇ ಹೂಡಿಕೆಯಾಗಲಿದೆ ಎಂದರು.
ಸರಕಾರ ಇತ್ತೀಚೆಗೆ ಎಸ್‌ಸಿ, ಎಸ್‌ಟಿಗಳಿಗೆ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳ ಮಾಡಿ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಅದೇ ರೀತಿ ರಾಜ್ಯದಲ್ಲಿರುವ 9 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ 6 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮತ್ತೆ ಕಂದಾಯ ಇಲಾಖೆಯ ವ್ಯಾಪ್ತಿಗೆ ತಂದು, ಶೀಘ್ರದಲೇ ರೈತರಿಗೆ ಹಕ್ಕು ಪತ್ರಗಳನ್ನು ನೀಡುವ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ. ಈ ಮೂಲಕ ದಶಕಗಳಿಂದ ತೊಂದರೆಗೊಳಗಾದ ಜನರ ಸಂಕಷ್ಟ ದೂರವಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಾಗೂ ಬೈಂದೂರಿನಲ್ಲಿ ಅಭಿವದ್ಧಿ ಆರಂಭವಾಗಿದೆ. 2019ರವರೆಗೆ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಗಳಿಗೆ ಚಾಲನೆ ನೀಡಲಾಗಿದೆ. ಕೇಂದ್ರದ ಅನುದಾನ ಬರುತ್ತಿವೆ. ಹೀಗಾಗಿ ಹಲವು ವರ್ಷಗಳ ಬೇಡಿಕೆಗೇಳು ಈಡೇರಿವೆ. ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ಧಿ ಪರ್ವ ನಡೆಯುತ್ತಿದೆ. ಬೈಂದೂರು ಕ್ಷೇತ್ರದಲ್ಲೂ ಡಬಲ್ ಇಂಜಿನ್ ಇದೆ. ಹೀಗಾಗಿ ಜನರಿಗೆ ಸ್ಪಂದಿಸುವ ಕೆಲಸ ನೆಡೆಯುತ್ತಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಕಾಮಗಾರಿಗಳ ವಿವರ ನೀಡಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಕ್ಷೇತ್ರದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳ ಮುಂದಿರಿಸಿ ದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಅತಿಥಿಗಳನ್ನು ಸ್ವಾಗತಿಸಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉದಯಕುಮಾರ್ ಶೆಟ್ಟಿ, ಜಿಲ್ಲೆಯ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ನಿ ಹಾಕ ಅಕ್ಷಯ್ ಮಚ್ಚೆಂದ್ರ, ಯಶ್ಪಾಲ್ ಸುವರ್ಣ, ಅಶೋಕ್‌ಕುಮಾರ್ ಕೊಡ್ಗಿ, ಕಿರಣ್‌ಕುಮಾರ್ ಕೊಡ್ಗಿ, ಮಣಿರಾಜ್ ಶೆಟ್ಟಿ, ನಿತಿನ್ ಆರ್. ಹೆಗ್ಡೆ ಉಪಸ್ಥಿ ರಿದ್ದರು.
ಪತ್ರಕರ್ತ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು.