ಹಾಸನ: ಈ ಸೈಬರ್ ಕಳ್ಳರ ಹಾವಳಿ ಎಷ್ಟಿದೆ ಎಂದರೆ ಈಗ ಪೊಲೀಸರಿಗೂ ಅನುಭವಕ್ಕೆ ಬಂದಿದೆ. ಇಲ್ಲಿನ ಡಿವೈಎಸ್ ಪಿ ಒಬ್ಬರ ಬ್ಯಾಂಕ್ ಖಾತೆಗೇ ಕನ್ನ ಹಾಕಿ 15 ಲಕ್ಷ ರೂ. ಹಣ ಸೈಬರ್ ಕಳ್ಳರು ಎಗರಿಸಿರುವ ಘಟನೆ ನಡೆದಿದೆ.
ಹಾಸನ ಉಪವಿಭಾಗದ ಪೊಲೀಸ್ ಡಿವೈಎಸ್ ಪಿ ಪಿ.ಕೆ. ಮುರಳೀಧರ್ ಅವರ ಖಾತೆಯಿಂದಲೇ 15,98,761 ರೂ. ಹಣ ವರ್ಗಾವಣೆ ಮಾಡಿಕೊಂಡು ಸೈಬರ್ ಕಳ್ಳರು ವಂಚಿಸಿದ್ದಾರೆ. ಹಾಸನ ನಗರ ಸೆನ್ ಠಾಣೆಗೆ ಮುರಳೀಧರ್ ಈ ಸಂಬಂಧ ದೂರು ನೀಡಿದ್ದಾರೆ.
ಮಡಿಕೇರಿಯ ಕೆನರಾ ಬ್ಯಾಂಕ್ ಮತ್ತು ಭಾಗಮಂಡಲದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮುರಳೀಧರ್ ಖಾತೆಗಳನ್ನು ಹೊಂದಿದ್ದಾರೆ. ಮೇ 20ರಂದು ತಮ್ಮ ಮೊಬೈಲ್ ಸಂಖ್ಯೆಗೆ ಖಾಲಿ ಮೆಸೇಜ್ ಗಳು ಬಂದಿವೆ. ನಂತರ ಬೇರೆ ಬೇರೆ ಖಾತೆಗಳಿಂದ ಹಣ ವರ್ವಾವಣೆಯಾಗಿದೆ. ಒಟ್ಟು 35 ವರ್ಗಾವಣೆ ಮೂಲಕ ಇಷ್ಟೊಂದು ಹಣ ವರ್ಗಾವಣೆಯಾಗಿದೆ.
ನಾಗರಿಕರು ಇಂತಹ ದೂರುಗಳನ್ನು ಹಿಡಿದುಕೊಂಡು ಹೋದಾಗ ಸೈಬರ್ ಖದೀಮರನ್ನು ಹಿಡಿಯಲು ನಿರ್ಲಕ್ಷ್ಯ ತೋರುವ ಪೊಲೀಸರಿಗೆ ಈಗ ಇದೊಂದು ಸವಾಲಿನ ಕೆಲಸವಾಗಿದೆ. ಪೊಲೀಸರನ್ನು ಅದೂ ಹಿರಿಯ ಅಧಿಕಾರಿಯೊಬ್ಬರ ಖಾತೆಗೇ ಕನ್ನ ಹಾಕುವ ಮಟ್ಟಿಗೆ ಸೈಬರ್ ಕಳ್ಳರು ಚಾಲಾಕಿಗಳಿದ್ದಾರೆಂದರೆ ಅವರು ಸಾಮಾನ್ಯ ನಾಗರಿಕರನ್ನು ಎಷ್ಟು ಕಾಡುತ್ತಾರೆಂದು ಲೆಕ್ಕಹಾಕಬಹುದಾಗಿದೆ.