ಬೆಂಗಳೂರು : ಸ್ವದೇಶಿ ವಿಜ್ಞಾನ ಆಂದೋಳನ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಡಿಸೆಂಬರ್ 6 ರಿಂದ 8 ರವರೆಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಆವರಣದಲ್ಲಿ “15ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ” ಆಯೋಜಿಸಲಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ವೈಜ್ಞಾನಿಕ ಸಮ್ಮೇಳನ ಸಹಕಾರಿಯಾಗಲಿದೆ.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯಲ್ಲಿ ತಲುಪಿಸುವ ಗುರಿ ಹೊಂದಲಾಗಿದೆ. ಆಧುನಿಕ ವಿಜ್ಞಾನದ ಜೊತೆಗೆ ಪಾರಂಪರಿಕ ವಿಜ್ಞಾನಗಳಾದ ಮನೋ ಅಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಯೋಗ, ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿ, ಕಲೆ, ಸಾಹಿತ್ಯ ಮತ್ತು ಆಧುನಿಕ ವಿಜ್ಞಾನಗಳನ್ನೊಳಗೊಂಡ ಸ್ವದೇಶಿ ವಿಜ್ಞಾನವನ್ನು ಉತ್ತೇಜಿಸಲು ಈ ವಿಜ್ಞಾನ ಮೇಳ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿ.ವಿ. ಕುಲಪತಿ ಡಾ. ಎಸ್. ಅಹಲ್ಯ, ಮಾತೃವೇದಿಕೆ ಸ್ವದೇಶಿ ವಿಜ್ಞಾನ ಆಂದೋಳನದ ಸಂಚಾಕರಾದ ಡಾ ವೈ. ಎಸ್. ಗಾಯತ್ರಿ ತಿಳಿಸಿದ್ದಾರೆ.ರಾಜ್ಯದಲ್ಲಿ ಸ್ವದೇಶಿ ವಿಜ್ಞಾನ ಆಂದೋಲನ 25 ಜಿಲ್ಲಾ ಘಟಕಗಳನ್ನು ಹೊಂದಿದ್ದು, ಮಹಿಳಾ ವಿಜ್ಞಾನ ಸಮ್ಮೇಳನದಲ್ಲಿ ರಾಜ್ಯದ ವಿಶ್ವವಿದ್ಯಾನಿಲಯ ಮತ್ತು ಪ್ರಾಧ್ಯಾಪಕರು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು, ಅನ್ವೇಷಣಾಭಿವೃದ್ಧಿ ಸಂಸ್ಥೆಗಳ ಮಹಿಳಾ ವಿಜ್ಞಾನಿಗಳು ಭಾಗಹಿಸಲಿದ್ದಾರೆ. ಭಾರತರತ್ನ ಸರ್ ಸಿ. ವಿ. ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರವನ್ನು ನಿರ್ಮಯಿ ಹೆಲ್ಸ್ ಅನಲೆಟಿಕ್ಸ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಗೀತಾ ಮಂಜುನಾಥ ಮತ್ತು ಮತ್ತು ಮೇಡಂ ಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ನಿಯಾಸ್ ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ದೀಪ್ತಿ ನವರತ್ನ ರವರಿಗೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.
ದೇಶದ 200 ಕ್ಕೂ ಹೆಚ್ಚು ಮಹಿಳಾ ವಿಜ್ಞಾನಿಗಳು, ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ವೈಜ್ಞಾನಿಕ ಲೇಖನ, ಪ್ರಬಂಧಗಳನ್ನು ಇಂಗ್ಲೀಷ್, ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಯಲ್ಲಿ ಮಂಡಿಸಲಿದ್ದಾರೆ. ಸಾಹಿತ್ಯ ಪರಿಷತ್ ನ ಶ್ರೀ ಕೃಷ್ಣ ಮಂದಿರದಲ್ಲಿ ಡಿ. 6 ರಂದು ಬೆಳಿಗ್ಗೆ 10 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸಿಂಧೂ ಬಿ. ರೂಪೇಶ್ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸ್ಕೃತ ವಿ.ವಿ. ಕುಲಪತಿ ಡಾ ಎಸ್ ಅಹಲ್ಯ, ಮಹಿಳಾ ವಿಜ್ಞಾನಿಗಳಾದ ಡಾ. ವಿ. ಶುಭಾ ಪಾಲ್ಗೊಳ್ಳಲಿದ್ದು, ಕೊಚ್ಚಿಯ ಚಿನ್ಮಯಿ ಅಂತರರಾಷ್ಟ್ರೀಯ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಗೌರಿ ಮಹುಲಿಕರ್ ಪ್ರಧಾನ ಭಾಷಣ ಮಾಡಲಿದ್ದಾರೆ. ಸ್ವದೇಶಿ ವಿಜ್ಞಾನ ಆಂದೋಳನ- ಕರ್ನಾಟಕದ ಘಟಕದ ರಾಜ್ಯಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೊಡೇ ಪಿ. ಕೃಷ್ಣ, ಸಂಸ್ಕೃತ ವಿ.ವಿ ಕುಲಸಚಿವ ವಿಶ್ವನಾಥ ಪಿ. ಹಿರೇಮರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.