ಹೊಸದಿಲ್ಲಿ: ಫಾರೆಕ್ಸ್ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ, ಹೈದರಾಬಾದ್, ಮುಂಬೈ, ಕುರುಕ್ಷೇತ್ರ ಮತ್ತು ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ವೇಳೆ ವಾಷಿಂಗ್ ಮೆಷಿನ್ ಒಂದರಲ್ಲಿ ಬರೋಬ್ಬರಿ 2.54 ಕೋಟಿ ರೂ. ಹಣ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತನ್ನ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ತಿಳಿಸಿದೆ.
ಮಂಗಳವಾರ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದ ಜಾರಿ ನಿರ್ದೇಶನಾಲಯವು, ಕ್ಯಾಪ್ರಿಕಾರ್ನಿಯನ್ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಸಂಜಯ್ ಗೋಸ್ವಾಮಿ ಹಾಗೂ ಅವರ ಸಂಬಂಧಿತ ಸಂಸ್ಥೆಗಳಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ ಎಂದು ತಿಳಿಸಿದೆ.
ಶೋಧದ ವೇಳೆ ವಾಷಿಂಗ್ ಮೆಷಿನ್ ಒಂದರಲ್ಲಿ ಬಚ್ಚಿಟ್ಟಿದ್ದ 2.54 ಕೋಟಿ ರೂ. ಹಣವನ್ನು ವಶಪಡಿಸಿ ಕೊಳ್ಳಲಾಗಿದೆ. ಇದಲ್ಲದೆ, ವಿವಿಧ ದೋಷಾರೋಪಣೆ ಯ ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡಿದೆ. ಅಲ್ಲದೇ 47 ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.