ಡಿ 14 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2024-25ನೇ ಸಾಲಿನ ತೃತೀಯ ಪಾಲಕ-ಶಿಕ್ಷಕರ ಸಭೆಯನ್ನು ಆಯೋಜಿಸಲಾಗಿತ್ತು. ಸದರಿ ಸಭೆಯಲ್ಲಿ 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಾಲಕರು, ಪಾಲಕ ಸಮಿತಿಯ ಅಧ್ಯಕ್ಷರಾದ ಮೀನಾಕ್ಷಿ, ಖಜಾಂಚಿಗಳಾದ ಗಣೇಶ್ ಹಾಗೂ ಇತರೆ ಪದಾಧಿಕಾರಿಗಳು . ಪ್ರಾಂಶುಪಾಲರು ಮತ್ತು ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿವೇಕ ಪಡಿಯಾರ್ ಇವರು ವರ್ಷ ಪೂರ್ತಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗಳ ಬಗ್ಗೆ ಸಭೆಗೆ ತಿಳಿಸಿದರು. ನಂತರ ಈ ಸಭೆಯಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರಿಂದ ತಂದೆ ತಾಯಿಗಳಿಗೆ ಪಾದಪೂಜೆ ಮಾಡಿಸಲಾಯಿತು. ಇತ್ತೀಚಿನ ದಿನಗಳಲ್ಲಿ ತಂದೆ ತಾಯಿ, ಗುರು ಹಿರಿಯರ ಬಗ್ಗೆ ಗೌರವ-ಸಂಸ್ಕಾರ ಭಾವ ಕುಸಿಯುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗುತ್ತಿದೆ ಎಂದು ಪ್ರಾಚಾರ್ಯರಾದ ಎಸ್.ಜಿ.ಹಿರೇಮಠರ್‌ರವರು ತಿಳಿಸಿದರು. ನಂತರ ಪ್ರಾಚಾರ್ಯರು ಪಾಲಕರ ಪ್ರಶ್ನೆಗಳಿಗೆ ಹಾಗೂ ಸಲಹೆ ಸೂಚನೆಗಳಿಗೆ ಉತ್ತರಿಸಿದರು. ಪಾನ್, ಆಧಾರ್ ತಿದ್ದುಪಡಿ ಶೈಕ್ಷಣಿಕ ದಾಖಲೆಗಳ ತಿದ್ದುಪಡಿ, ಶಾಲಾಭಿವೃದ್ಧಿ ಕಾರ್ಯಕ್ರಮಗಳು, ವಿದ್ಯಾರ್ಥಿನಿಯರ ಸುರಕ್ಷತೆ SSLC ಫಲಿತಾಂಶ ಸುಧಾರಣೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಸುಧಾರಣೆ ಕುರಿತು ಅನೇಕ ವಿಷಯಗಳನ್ನು ಪಾಲಕರೊಂದಿಗೆ ಚರ್ಚಿಸಿದರು. 6 ನೇ ತರಗತಿಯ ಮೇಘನಾ ಇವಳ ಪೋಷಕರಾದ ಕೇಶವ.ಎ, ಅಧ್ಯಕ್ಷರು, ಅರಂತೋಡು ಗ್ರಾಮ ಪಂಚಾಯತ್, ಸುಳ್ಯ ಇವರು ತಮ್ಮ ಗ್ರಾಮಪಂಚಾಯತ್ ಅಧ್ಯಕ್ಷ ಹುದ್ದೆಯ ಪಿಂಚಣಿಯ 20,000 ರೂಪಾಯಿಗಳನ್ನು SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದರಿ ಶಾಲೆಯ ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ನೀಡಲು ಸಂಚಿತ ನಿಧಿಯಾಗಿ ಶಾಲೆಗೆ ಕೊಡಲು ಘೋಷಿಸಿದರು. ಉಳಿದ ಪಾಲಕರು ಶಾಲಾಭಿವೃದ್ಧಿಗೆ ಏನಾದರೂ ಸಹಾಯ ಸಹಕಾರ ಬೇಕಾದರೆ ಕೊಡುವುದಾಗಿ ತಿಳಿಸಿದರು. ಸವಿತಾ ನಿರೂಪಿಸಿದರು. ವಿನಯಾ ಸ್ವಾಗತಿಸಿದರು, ಕಸ್ತೂರಿ ವಂದಿಸಿದರು.