2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕುರಿತು ಭಾರತದ ನಿಲುವು ದೃಢವಾಗಿದ್ದು, ಕ್ರಿಕೆಟ್ ಮತ್ತು ಭಯೋತ್ಪಾದನೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಬಾರಿ ಅಲ್ಲಿಗೆ ಹೋಗುವುದಿಲ್ಲ ಎಂದು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ. ಚಾಂಪಿಯನ್ಸ್ ಟ್ರೋಫಿ 2025 ಪಾಕಿಸ್ತಾನದಲ್ಲಿ ನಡೆಯಲಿದೆ ಎಂಬುದಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಹೇಳುತ್ತಿದೆ. ಭಾರತವು ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂಬ ನಿಲುವನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್‍ನಲ್ಲಿ ಭಾಗವಹಿಸಲು ಭಾರತ ನಿರಾಕರಿಸಿತ್ತು. ಏಷ್ಯಾ ಕಪ್ ಪಂದ್ಯಾವಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ನಡೆಯಿತು. ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದವು, ಇದರಲ್ಲಿ ಭಾರತ- ಪಾಕಿಸ್ತಾನ ಪಂದ್ಯವೂ ಸೇರಿದೆ. ಶ್ರೀಲಂಕಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಭಾರತ ಏಷ್ಯಾಕಪ್ ತನ್ನದಾಗಿಸಿಕೊಂಡಿತ್ತು. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಅನ್ನು ಪಾಕಿಸ್ತಾನಕ್ಕೆ ನಿಗದಿಪಡಿಸಿದ ನಂತರ ಭಾರತೀಯ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಬಿಸಿಸಿಐ ಮನವೊಲಿಸಲು ಪಿಸಿಬಿ ಪ್ರಯತ್ನಿಸುತ್ತಿದೆ. ಆದರೆ, ಭಾರತ ಪಿಸಿಬಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ. ಭಾರತದ ಉಪಸ್ಥಿತಿಯಿಲ್ಲದೆ, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಬೇಕಾಗಬಹುದು. ಏಷ್ಯಾ ಕಪ್ ಪರಿಸ್ಥಿತಿಯಂತೆಯೇ ಹೈಬ್ರಿಡ್ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ.