Saturday, December 14, 2024
Homeಪುತ್ತೂರುವಿವೇಕ ವಿಜಯ ಕಾರ್ಯಕ್ರಮದ 2ನೇ ಅವಧಿ -"ವಿವೇಕ ಶಿಕ್ಷಣ ರಾಷ್ಟ್ರ ನಿರ್ಮಾಣ"

ವಿವೇಕ ವಿಜಯ ಕಾರ್ಯಕ್ರಮದ 2ನೇ ಅವಧಿ -“ವಿವೇಕ ಶಿಕ್ಷಣ ರಾಷ್ಟ್ರ ನಿರ್ಮಾಣ”

“ಶಿಕ್ಷಕನಾದವನು ಆದರ್ಶ, ಮೌಲ್ಯಗಳನ್ನು ಹೊತ್ತ ವಿದ್ಯಾರ್ಥಿ ಸಮೂಹದ ಸೃಷ್ಟಿ ಮಾಡಬೇಕು: ಚಕ್ರವರ್ತಿ ಸೂಲಿಬೆಲೆ

  • ವಿವೇಕ ಶಿಕ್ಷಣ- ರಾಷ್ಟ್ರನಿರ್ಮಾಣʼ ಶೀರ್ಷಿಕೆಯಡಿ ಶಿಕ್ಷಕರಿಗಾಗಿ  ವಿಶೇಷ ಉಪನ್ಯಾಸ ಕಾರ್ಯಕ್ರಮ.
  • ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 131 ನೇ ವರ್ಷದ ಪ್ರಯುಕ್ತ ವಿಶೇಷ ಕಾರ್ಯಕ್ರಮ.
  • ಚಿಂತಕರು ಹಾಗೂ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಇವರಿಂದ ಉಪನ್ಯಾಸ.

 “ಶಿಕ್ಷಕನಾದವನು ಮೊದಲು ʼಗುರುʼವಾಗಬೇಕು. ಭಾರತದಲ್ಲಿ ಗುರುವಿನ ಮೌಲ್ಯ ಬಹು ವಿಸ್ತಾರವಾದದು. ಪ್ರತಿ ವಿದ್ಯಾರ್ಥಿಯ ಅಂತರಂಗದಲ್ಲಿರುವ ವಿಶೇಷತೆಯನ್ನು ಗುರುತಿಸುವ ಪ್ರಯತ್ನವನ್ನು ಗುರುವಾದವನು ಮಾಡಬೇಕು. ಶಿಕ್ಷಣ ಮತ್ತು ಶಿಕ್ಷೆ ಎರಡನ್ನೂ ನೀಡುವ  ಶಿಕ್ಷಕ ಮಕ್ಕಳಿಗೆ ಮಮತೆ ಪ್ರೀತಿಯ ಧಾರೆಯನ್ನು ಎರೆದಲ್ಲಿ

ಉತ್ಕೃಷ್ಟ ವಿದ್ಯಾರ್ಥಿಗಳ ಸೃಷ್ಟಿ ಸಾಧ್ಯವಿದೆ. ಮೌಲ್ಯಗಳನ್ನು ಕಳೆದುಕೊಂಡು ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ಶಿಕ್ಷಕನಾದವನು ಮೌಲ್ಯಗಳನ್ನು ಪುನರ್‌ಸ್ಥಾಪಿಸಬೇಕಾದ ತುರ್ತು ಇಂದಿನ ದಿನಗಳಿಗಿದೆ.” ಎಂದು ಚಕ್ರವರ್ತಿ ಸೂಲಿಬೆಲೆ ಅವರು ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ “ವಿವೇಕ ವಿಜಯ” ಉಪನ್ಯಾಸ ಕಾರ್ಯಕ್ರಮದ ಎರಡನೆಯ ಅವಧಿಯು “ವಿವೇಕ- ಶಿಕ್ಷಣ ರಾಷ್ಟ್ರ ನಿರ್ಮಾಣ” ಎಂಬ ಶೀರ್ಷಿಕೆಯಡಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರಿಗಾಗಿ ನಡೆಯಿತು. ಈ ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಇದರ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀಪತಿ ಕಲ್ಲೂರಾಯ ಇವರು ಮಾತನಾಡುತ್ತಾ “ಭಾರತೀಯರಾದ ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಒಲವು ತೋರದೆ ನಮ್ಮ ಸನಾತನ ಸಂಸ್ಕೃತಿಯ ಮಹೋನ್ನತಿಯನ್ನು ಅರ್ಥೈಸಿಕೊಂಡು ಪಾಶ್ಚಾತ್ಯ ದೇಶಗಳಲ್ಲಿ ಹಿಂದೂ ಧರ್ಮದ ಚಿಂತನೆಗಳನ್ನು ಬಿತ್ತರಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಮೌಲ್ಯ, ಆದರ್ಶಗಳನ್ನು ಪ್ರತೀ ಭಾರತೀಯನೂ ಅಳವಡಿಸಿಕೊಳ್ಳಬೇಕಿದೆ.” ಎಂದರು. ಈ ಅವಧಿಯಲ್ಲಿ ಶಿಕ್ಷಕರನ್ನುದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಇವರು ದಿಕ್ಸೂಚಿ ಮಾತುಗಳನ್ನಾಡುತ್ತಾ  “ಸ್ವಾಮಿ ವಿವೇಕಾನಂದರ ಧೀಮಂತ ವ್ಯಕ್ತಿತ್ವ, ಒಂದು ಅದ್ಭುತವಾದ ಸಮಾಜವನ್ನು ನಿರ್ಮಿಸಿಕೊಟ್ಟಿದೆ. ವಿದ್ಯಾರ್ಥಿಗಳಲ್ಲಿ ಧರ್ಮ, ಸಂಸ್ಕಾರ, ದೇಶಪ್ರೇಮವನ್ನು ಜಾಗೃತಗೊಳಿಸುವ ಮೂಲಕ ಶಿಕ್ಷಕನಾದವನು ಜಾಗೃತ ಸಮಾಜದ ನಿರ್ಮಾಣವನ್ನು ಮಾಡಬೇಕಾಗಿದೆ. ನಮ್ಮ ಮಕ್ಕಳನ್ನು ಸಾಂಪ್ರದಾಯಿಕವಾಗಿ, ಭಾರತೀಯತೆಗೆ ಹತ್ತಿರವಾಗಿ ಬೆಳೆಸುವ ಹಾಗೂ ಆದರ ಮೌಲ್ಯಗಳನ್ನು ಹೊತ್ತ ವಿದ್ಯಾರ್ಥಿ ಸಮೂಹವನ್ನು ಸೃಷ್ಟಿಮಾಡಬೇಕಾದ ಹೊಣೆಗಾರಿಕೆಯನ್ನು ಇಂದು ಪ್ರತಿಯೊಬ್ಬ ಶಿಕ್ಷಕ ನಿಭಾಯಿಸಬೇಕಿದೆ.”  ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ  ಆಡಳಿತಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ, ಅಧ್ಯಕ್ಷರಾದ ರವೀಂದ್ರ ಪಿ ,  ಕೋಶಾಧಿಕಾರಿಗಳಾದ ಸಚಿನ್‌ಶೆಣೈ  ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

ಪ್ರೇರಣಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ  ಆಡಳಿತಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ ಸ್ವಾಗತಿಸಿ, ಉಪನ್ಯಾಸಕಿ ನಳಿನ ಕುಮಾರಿ ಎ. ಎನ್‌ ವಂದಿಸಿದರು. ಉಪನ್ಯಾಸಕಿ ಮೊನಿಶಾ ಎನ್‌ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES
- Advertisment -
Google search engine

Most Popular