ಲಕ್ನೋ: ಕಾರೊಂದು ಕಾಲುವೆ ಬಿದ್ದು ಮೂವರು ಮೃತಪಟ್ಟು, ಮೂವರು ನಾಪತ್ತೆ ಆಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಭಾನುವಾರ (ಮಾ.3 ರಂದು) ರಾತ್ರಿ ನಡೆದಿರುವುದು ವರದಿಯಾಗಿದೆ.
ಜಹಾಂಗೀರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ. ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಅಲಿಗಢ್ ಪಿಸಾವಾಗೆ ತೆರಳುತ್ತಿದ್ದ ಇಕೋ ಕಾರಿನೊಳಗೆ ಒಟ್ಟು ಎಂಟು ಮಂದಿ ಇದ್ದರು.
ವಾಹನ ಪಲ್ಟಿಯಾದ ಪರಿಣಾಮ ಕಾಲುವೆಗೆ ಬಿದ್ದಿದೆ ಎಂದು ವರದಿ ತಿಳಿಸಿದೆ.ಘಟನೆಯಲ್ಲಿ ಐದು ಜನರನ್ನು ಕಾಲುವೆಯಿಂದ ರಕ್ಷಿಸಲಾಗಿದೆ. ಇದರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಮೃತರು 18 ರಿಂದ 22 ವರ್ಷದೊಳಗಿನವರಾಗಿದ್ದು. ನಾಪತ್ತೆ ಆದವರಲ್ಲಿ ಐದು ವರ್ಷದ ಮಗು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಸದ್ಯ ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ. “ಕಾರು ಜಹಾಂಗೀರ್‌ಪುರ ಪೊಲೀಸ್ ಠಾಣೆಯ ಕಪ್ನಾ ಕಾಲುವೆಗೆ ಬಿದ್ದಿದೆ. ನಾಪತ್ತೆಯಾದ ಮೂವರಿಗಾಗಿ ಇನ್ನೂ ರಕ್ಷಣೆ ಮುಂದುವರೆದಿದೆ. ಎನ್‌ಡಿಆರ್‌ಎಫ್ ತಂಡ ಸೇರಿದಂತೆ ಎಲ್ಲಾ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳದಲ್ಲಿದ್ದಾರೆ” ಎಂದು ಬುಲಂದ್‌ಶಹರ್ ಎಸ್‌ಎಸ್‌ಪಿ ಶ್ಲೋಕ್ ಕುಮಾರ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸಂತ್ರಸ್ತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.