ಚೆನ್ನೈ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಹುಡುಕಾಟದ ವೇಳೆ ಮಗುವಿನ ಶವ ಪಕ್ಕದ ಮನೆಯ ವಾಶಿಂಗ್ ಮೆಷಿನ್‌ನಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಪಕ್ಕದ ಮನೆಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ನಿವಾಸಿಯಾಗಿರುವ ವಿಘ್ನೇಶ್ ಮತ್ತು ರಮ್ಯಾ ದಂಪತಿಯ ಪುತ್ರ ಸಂಜಯ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮಗುವಿನ ತಾಯಿ ಎಲ್ಲೆಡೆ ಹುಡುಕಿದಾಗ ಮಗು ಸಿಗದೆ ಆತಂಕಗೊಂಡು ಪತಿಗೆ ತಿಳಿಸಿದ್ದಾಳೆ. ಪತಿ ಬಂದು ಎಷ್ಟೇ ಹುಡುಕಾಡಿದರೂ ಮಗು ಸಿಕ್ಕಿರಲಿಲ್ಲ. ಬಳಿಕ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಯಾರ ಮೇಲಾದರೂ ಸಂಶಯವಿದೆಯೇ? ಎಂದು ಪ್ರಶ್ನಿಸಿದ್ದಾರೆ. ಆಗ ಪೋಷಕರು ನೆರೆಮನೆಯವರ ಮೇಲೆ ಸಂಶಯವಿರುವ ಬಗ್ಗೆ ಹೇಳಿದ್ದಾರೆ.
ಪೊಲೀಸರು ನೆರೆಮನೆಗೆ ಹೋಗಿ ವಿಚಾರಿಸಿದಾಗ ಮಹಿಳೆ ತಂಕಮ್ಮ ತನಗೇನು ಗೊತ್ತಿಲ್ಲ ಎಂಬಂತೆ ನಟಿಸಿದ್ದಾಳೆ. ಆದರೆ ಪೊಲೀಸರು ಮನೆಯೊಳಗೆ ಹುಡುಕಾಟ ನಡೆಸುವ ವೇಳೆ ಗಾಬರಿಗೊಂಡ ತಂಕಮ್ಮ ಮನೆಯಿಂದ ಹೊರಗೆ ಓಡಿ ಹೋಗಿದ್ದಾಳೆ. ಇದರಿಂದ ಸಂಶಯಗೊಂಡು ಪೊಲೀಸರು ಇನ್ನಷ್ಟು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಈ ವೇಳೆ ಮನೆಯೊಳಗಿದ್ದ ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆಯಿಂದ ಸುತ್ತಿದ ರೀತಿಯಲ್ಲಿ ಸಂಜಯ್ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ, ಎರಡು ಕುಟುಂಬಗಳ ನಡುವೆ ಹಳೆಯ ದ್ವೇಷವಿತ್ತು. ಅಲ್ಲದೆ, ತಂಕಮ್ಮಳ ಪುತ್ರ ಇತ್ತೀಚೆಗೆ ನಿಧನ ಹೊಂದಿದ್ದ. ಆ ಬಳಿಕ ಆಕೆ ಖಿನ್ನತೆಗೊಳಗಾಗಿದ್ದಾಳೆ ಎನ್ನಲಾಗಿದೆ. ಆದರೆ ಕೊಲೆಗೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.