ಉಡುಪಿ: ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಅಭಯ್ (23) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಇದಕ್ಕೂ ಮೊದಲು ಬಂಗ್ಲೆಗುಡ್ಡೆ ನಿವಾಸಿ ಅಲ್ತಾಫ್ (34) ಮತ್ತು ಕ್ಸೇವಿಯರ್ ರಿಚರ್ಡ್ ಕ್ವಾಡ್ರಸ್ (35) ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಬಂಧಿತ ಅಲ್ತಾಫ್‌ಗೆ ಅಭಯ್ ಮಾದಕ ವಸ್ತು ಕೊಟ್ಟಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಹೇಳಿದ್ದಾರೆ. ಕೃತ್ಯ ಎಸಗಿದ ಮೇಲೆ ಅಲ್ತಾಫ್ ತಪ್ಪಿಸಿಕೊಳ್ಳಲು ಅಭಯ್ ಸಹಕಾರ ನೀಡಲು ಯತ್ನಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಭಯ್‌ನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಶಯದ ಆಧಾರದ ಮೇಲೆ ಇನ್ನೂ ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರ ವಿಚಾರಣೆ ನಡೆಯುತ್ತಿದೆ ಎಂದೂ ಎಸ್ಪಿ ತಿಳಿಸಿದ್ದಾರೆ. ಕಳೆದ ಶುಕ್ರವಾರ ಯುವತಿಯೊಬ್ಬಳನ್ನು ಅಪಹರಿಸಿ ಮದ್ಯದಲ್ಲಿ ಮಾದಕ ವಸ್ತು ಸೇರಿಸಿ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಗ್ಗೆ ದೂರು ದಾಖಲಾಗಿತ್ತು. ಯುವತಿ ಅಸ್ವಸ್ಥಗೊಂಡಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಮುಂದೆ ಹಿಂದೂ ಸಂಘಟನೆಗಳು ಜಮಾಯಿಸಿ, ಆರೋಪಿಗಳನ್ನು ಬಂಧಸುವಂತೆ ಒತ್ತಾಯಿಸಿದ್ದವು.