ರಾಮನಗರ: ಸಂಬಂಧಿಯೇ 4 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಿ, ಶವವನ್ನು ಎಸಗಿದ ಘಟನೆ ನಡೆದಿದೆ. ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಬಾಲಕಿ ನಾಪತ್ತೆ ಬಗ್ಗೆ ಪೋಷಕರು ನೀಡಿದ್ದ ದೂರಿನ ವಿಚಾರಣೆ ನಡೆದಾಗ, ಬಾಲಕಿಯ ತಂದೆಯ ಸಂಬಂಧಿಯಾಗಿದ್ದ ಇರ್ಫಾನ್ ಖಾನ್ ಎಂಬಾತ ಈ ದುಷ್ಕೃತ್ಯ ಎಸಗಿರುವುದು ಪತ್ತೆಯಾಗಿದೆ.
ಸೈಫ್ ಅಲಿ ಖಾನ್ ಎನ್ನುವರ ಮಗಳು ಜೈಬಾ ಖಾನಂ (4) ಎಂಬ ಬಾಲಕಿಗೆ ಇರ್ಫಾನ್ ಖಾನ್ ಎಂಬಾತ ಚಾಕೊಲೇಟ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ. ಶವನ್ನು ರಸ್ತೆ ಬದಿಯ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದ. ಬಾಲಕಿ ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಮಾಗಡಿಯ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪ್ತರಕರಣದ ನಿಖೆ ಕೈಗೊಂಡಿದ್ದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿಯನ್ನು ಆರೋಪಿ ಇರ್ಫಾನ್ ಖಾನ್ ಕರೆದುಕೊಂಡು ಹೋಗುತ್ತಿರುವ ದೃಶ್ಯ ಲಭ್ಯವಾಗಿದೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ವಿಚಾರಣೆ ನಡೆಸಿದ ಪೊಲೀಸರ ಮುಂದೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.
ಇನ್ನು ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಮಾಗಡಿ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆದಿದೆ. ಬಾಲಕಿ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಯನ್ನ ಗಲ್ಲಿಗೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.