ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಮೀನಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರ ವಾಸ್ತವ್ಯದ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಮಧ್ಯಾಹ್ನ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಈ ವೇಳೆ 40 ಗ್ರಾಂ. ಚಿನ್ನ ಪತ್ತೆಯಾಗಿದೆ.
ಕೆಡವಲಾದ ಮನೆಯಲ್ಲಿ ಚಿನ್ನ, ನಗದು ಸಹಿತ ಬೆಲೆಬಾಳುವ ವಸ್ತುಗಳಿದ್ದವು ಎಂದು ರಾಜೇಶ್ ಬನ್ನೂರು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜೇಶ್ ಉಪಸ್ಥಿತಿಯಲ್ಲಿ ನಗರ ಠಾಣೆ ಪೊಲೀಸರು ಜೆಸಿಬಿ ಬಳಸಿ ಚಿನ್ನಾಭರಣವಿದ್ದ ಸ್ಥಳವನ್ನು ಶೋಧಿಸಿದರು. ಈ ಸಂದರ್ಭದಲ್ಲಿ ಚಿನ್ನ ಪತ್ತೆಯಾಗಿದ್ದು, ಅಕ್ಕಸಾಲಿಗನ ಸಮಕ್ಷಮದಲ್ಲಿ ಅದರ ಅಸಲಿಯತ್ತನ್ನು ಖಚಿತಪಡಿಸಿ ಲೆಕ್ಕಾಚಾರ ನಡೆಸಲಾಯಿತು. ಅದಾದ ಬಳಿಕ ಮಹಜರು ನಡೆಸಿ ಚಿನ್ನವನ್ನು ವಶಕ್ಕೆ ಪಡೆಯಲಾಯಿತು.
ಆಡಳಿತ ಮಂಡಳಿ ಪರವಾಗಿ ಸಂರಕ್ಷಣ ಸಮಿತಿ ಮನವಿ ವ್ಯವಸ್ಥಾಪನ ಸಮಿತಿ ಮೇಲೆ ಯಾವುದೇ ಪ್ರಕರಣ ದಾಖಲಿಸದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣ ಸಮಿತಿ ವತಿಯಿಂದ ನಗರ ಠಾಣೆಗೆ ಮನವಿ ಸಲ್ಲಿಸಲಾಗಿದೆ. ದೇವಾಲಯಕ್ಕೆ ಸೇರಿರುವ ಜಮೀನು ದೇವಾಲಯದ ವಶದಲ್ಲೇ ಇರಬೇಕು. ಅಲ್ಲಿ ಮನೆ ಕಟ್ಟಿ ವಾಸವಾಗಿರುವುದು ಸರಿಯಲ್ಲ. ಆಕ್ರಮಿತ ಜಮೀನನ್ನು ವಶಕ್ಕೆ ಪಡೆಯಲು ಈಗಿನ ಆಡಳಿತ ಮಂಡಳಿ ಉತ್ಸಾಹ ಹೊಂದಿದ್ದು, ಭಕ್ತರ ಆಶಯದಂತೆ ನಡೆದುಕೊಂಡಿದೆ. ಹೀಗಾಗಿ ಮನೆ ತೆರವು ಸಂಬಂಧಿಸಿ ಆಡಳಿತ ಮಂಡಳಿ ವಿರುದ್ಧ ರಾಜೇಶ್ ಬನ್ನೂರು ನೀಡಿರುವ ದೂರನ್ನು ದಾಖಲಿಸಿಕೊಳ್ಳಬಾರದು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಬಾಲಚಂದ್ರ ಸೊರಕೆ ಮೊದಲಾದವರಿದ್ದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ನೀಡಿದ ದೂರಿನಂತೆ ರಾಜೇಶ್ ಬನ್ನೂರು ಸಹಿತ 9 ಮಂದಿಯ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮುಂಜಾನೆ ರಾಜೇಶ್ ಬನ್ನೂರು ಮತ್ತವರ 9 ಮಂದಿಯ ತಂಡವೊಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಅಕ್ರಮವಾಗಿ ಪ್ರವೇಶಗೈದು ಅಲ್ಲಿನ ಕಟ್ಟಡವನ್ನು ಧ್ವಂಸ ಮಾಡಿ, ದೇವಾಲಯದ ಅಧ್ಯಕ್ಷರನ್ನು ಉದ್ದೇಶಿಸಿ ಬೆದರಿಕೆ ಒಡ್ಡಿ ಪರಾರಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಿಎನ್‌ಎಸ್2023 ಯು/ಎಸ್ 189(2)191(2),329(3),324(5),351(2),190ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.
ಬನ್ನೂರು ದಂಪತಿಯಿಂದ ದೇಗುಲದಲ್ಲಿ ಪ್ರಾರ್ಥನೆ ಬುಧವಾರ ರಾತ್ರಿ ರಾಜೇಶ್ ಬನ್ನೂರು ದಂಪತಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಮನೆ ಧ್ವಂಸ ಮಾಡಿದವರಿಗೆ ಶಿಕ್ಷೆ ನೀಡುವಂತೆ ಅವರು ಪ್ರಾರ್ಥಿಸಿರುವುದಾಗಿ ತಿಳಿದು ಬಂದಿದೆ.