Thursday, May 1, 2025
Homeಮಂಗಳೂರುವಿವೇಕವಾಣಿ ಸರಣಿ ಕಾರ್ಯಕ್ರಮದ 43 ನೇ ಉಪನ್ಯಾಸ

ವಿವೇಕವಾಣಿ ಸರಣಿ ಕಾರ್ಯಕ್ರಮದ 43 ನೇ ಉಪನ್ಯಾಸ

ಸ್ವಾಮಿ ವಿವೇಕಾನಂದರು ಸದಾ ನಮ್ಮಲ್ಲಿರುವ ಶಕ್ತಿಯ ಸ್ವರೂಪ: ಡಾ. ವಿಜಯ ಸರಸ್ವತಿ ಬಿ

ಸ್ವಾಮಿ ವಿವೇಕಾನಂದರು ಭಾರತೀಯ ತತ್ವಶಾಸ್ತ್ರ, ಆಧ್ಯಾತ್ಮಿಕತೆ ಹಾಗೂ ಸಮಾಜಸೇವೆಗೆ ಶಾಶ್ವತ ಸ್ಫೂರ್ತಿಯಾಗಿದ್ದಾರೆ. ಅವರ ಸಂದೇಶಗಳು ಶಕ್ತಿಶಾಲಿ, ಸಮಕಾಲೀನ ಮತ್ತು ಎಲ್ಲಾ ತಲೆಮಾರುಗಳಿಗೆ ಪೂರಕವಾಗಿವೆ. ವಿಶ್ವದ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಘೋಷಿಸಿದ ಅವರು, ಯುವಕರಿಗೆ ಆತ್ಮವಿಶ್ವಾಸ, ಶಿಸ್ತು, ತ್ಯಾಗ ಮತ್ತು ಸೇವೆಯ ಮಹತ್ವವನ್ನು ಬೋಧಿಸಿದರು.

ವಿವೇಕಾನಂದರು ಭಾರತೀಯ ಯುವಕರಿಗೆ “ಉತ್ತಿಷ್ಠತ ಜಾಗ್ರತ” ಎಂಬ ಸಂದೇಶ ನೀಡಿ, ಅವರಲ್ಲಿ ದೇಶಭಕ್ತಿಯನ್ನು ಮೂಡಿಸಿದರು. ಅವರಿಂದ ಪ್ರೇರಿತರಾದ ಅನೇಕರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಒತ್ತಿಹೇಳಿದ ಅಧ್ಯಾತ್ಮಿಕತೆ ಹಾಗೂ ವೈಜ್ಞಾನಿಕ ಮನೋಭಾವಗಳು ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಲು ಸಹಾಯಕವಾಗಿದೆ. ಸಮಾಜದ ಶೋಷಿತ ಮತ್ತು ನಿರ್ಗತಿಕ ವರ್ಗಗಳಿಗೆ ಶಿಕ್ಷಣ, ಸ್ವಾವಲಂಬನೆ ಮತ್ತು ಗೌರವಯುತ ಜೀವನ ದೊರಕಬೇಕು ಎಂಬುದು ಅವರ ಕನಸಾಗಿತ್ತು. ಇದೇ ಕಾರಣದಿಂದ ಅವರು ರಾಮಕೃಷ್ಣ ಮಿಷನ್ ಸ್ಥಾಪಿಸಿ, ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳನ್ನು ವಿಸ್ತರಿಸಿದರು. ಅವರ ತತ್ವಗಳು ಶಿಕ್ಷಣ, ಆರೋಗ್ಯ, ಸ್ತ್ರೀಶಕ್ತಿ, ಮತ್ತು ಆತ್ಮನಿರ್ಭರತೆಯನ್ನು ಉತ್ತೇಜಿಸುತ್ತವೆ.

ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದು ಸಹ ಪ್ರಸ್ತುತವಾಗಿವೆ. ಅವರ ಜೀವನ ಹಾಗೂ ಸಂದೇಶಗಳು ಯುವಕರಿಗೆ ಶಕ್ತಿಯುತ ಮಾರ್ಗದರ್ಶನ ನೀಡುತ್ತವೆ. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸದೃಢ ವ್ಯಕ್ತಿತ್ವ ಹಾಗೂ ರಾಷ್ಟ್ರನಿರ್ಮಾಣದ ದಾರಿಯಲ್ಲಿ ನಾವು ಮುಂದುವರಿಯಬಹುದು. ಸ್ವಾಮಿ ವಿವೇಕಾನಂದರು ಸದಾ ನಮ್ಮಲ್ಲಿರುವ ಶಕ್ತಿಯ ಸ್ವರೂಪ – ಚಿರಂತನ ಸ್ಫೂರ್ತಿ! ಎಂದು ಪುತ್ತೂರಿನ ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಸ್ನಾತಕೋತ್ತರ ವಿಭಾಗದ ಡೀನ್ ಆಗಿರುವ ಡಾ. ವಿಜಯ ಸರಸ್ವತಿ ಬಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತಮೂರನೇ ಉಪನ್ಯಾಸದಲ್ಲಿ “ಸ್ವಾಮಿ ವಿವೇಕಾನಂದ – ಚಿರಂತನ ಸ್ಪೂರ್ತಿ” ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಈ ಕಾರ್ಯಕ್ರಮವು ಮೂಡಬಿದ್ರೆಯ ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಮೇಶ್ ಭಟ್, ಮಾಜಿ ಸೈನಿಕರಾದ ಬೆಳ್ಳಾಲ ಗೋಪಿನಾಥ್ ರಾವ್, ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಹರೀಶ್, ವಿದ್ಯಾರ್ಥಿ ನಾಯಕಿಯಾದ ಶ್ರುತಿ ಹಾಗೂ ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ಶ್ರೀ ಮಹಾವೀರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚಿನ್ನಸ್ವಾಮಿ ವಂದಿಸಿದರು. ವಿದ್ಯಾರ್ಥಿನಿಯಾದ ರಕ್ಷಿತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES
- Advertisment -
Google search engine

Most Popular