ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವು
ಉಡುಪಿ : ದರ್ಪಣ ಮಹಿಳಾ ಪಿಲಿ ತಂಡದ ವತಿಯಿಂದ 4&5ರಂದು 4ನೇ ವರ್ಷದ ಹುಲಿವೇಷ ಕುಣಿತಾ ನಡೆಯಲಿದ್ದು ಲೋಬಾನ ಸೇವೆಯು ಸೆ.4ರಂದು ಹಾಗೂ ಪಿಲಿ ನಲಿಕೆ 4 ಮತ್ತು 5ರಂದು ಕೊರಂಗ್ರಪಾಡಿ ಉಡುಪಿಯಲ್ಲಿ ನಡೆಯಲಿದೆ.
ಹುಲಿವೇಷದ ಮೂಲಕ ಸಂಭ್ರಮದ ಜೊತೆಗೆ ಸಾಮಾಜಿಕ ಸೇವೆಯ ಸಂದೇಶವನ್ನು ಸಾರುತ್ತಿರುವ ದರ್ಪಣ ಮಹಿಳಾ ಪಿಲಿ ತಂಡ, ಈ ಬಾರಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ನೆರವಾಗಲು ಮುಂದಾಗಿದೆ.
ದರ್ಪಣ ಮಹಿಳಾ ಪಿಲಿ ತಂಡವು ಈ ವರ್ಷ ತನ್ನ 4ನೇ ವರ್ಷದ ಹುಲಿವೇಷ ಕುಣಿತವನ್ನು ಆಯೋಜಿಸುತ್ತಿದ್ದು, ಹುಲಿವೇಷ ಪ್ರದರ್ಶಿಸಲು ಆಸಕ್ತಿ ಹೊಂದಿರುವ ಹೆಣ್ಣುಮಕ್ಕಳಿಗೆ ಸುರಕ್ಷಿತ, ಆತ್ಮೀಯ ಹಾಗೂ ಆರಾಮದಾಯಕ ವೇದಿಕೆಯನ್ನು ಒದಗಿಸುತ್ತಿರುವ ಹೆಣ್ಣುಮಕ್ಕಳ ಏಕೈಕ ಪಿಲಿ ತಂಡ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಈ ವರ್ಷ 30ಕ್ಕೂ ಹೆಚ್ಚು ಹೆಣ್ಣುಮಕ್ಕಳು ತಂಡದೊಂದಿಗೆ ಹುಲಿವೇಷದಲ್ಲಿ ಭಾಗವಹಿಸುತ್ತಿದ್ದು, ವಿಭಿನ್ನ ರೀತಿಯಲ್ಲಿ ಹುಲಿವೇಷದ ಸಂಭ್ರಮವನ್ನು ಮೂಡಿಸಲು ಸಜ್ಜಾಗಿದ್ದಾರೆ. ಈ ಬಾರಿ ತಂಡದ ಹುಲಿವೇಷ ಪ್ರದರ್ಶನದಿಂದ ಸಂಗ್ರಹವಾಗುವ ಮೊತ್ತವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ದೇಣಿಗೆಯಾಗಿ ನೀಡಲು ತಂಡ ನಿರ್ಧರಿಸಿದೆ.
ಈ ಸತ್ಕಾರ್ಯಕ್ಕೆ ಸಾರ್ವಜನಿಕರು ತಮ್ಮ ಕೈಲಾದಷ್ಟು ದೇಣಿಗೆ ನೀಡಿ ತಂಡದೊಂದಿಗೆ ಕೈಜೋಡಿಸುವಂತೆ ದರ್ಪಣ ಮಹಿಳಾ ಪಿಲಿ ತಂಡ ಮನವಿ ಮಾಡಿದೆ. ಹುಲಿವೇಷದ ಸಂಭ್ರಮದೊಂದಿಗೆ ಸಮಾಜಮುಖಿ ಕಾರ್ಯಕ್ಕೂ ಕೈಜೋಡಿಸುವ ಮೂಲಕ ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ನೆರವಾಗುವ ಅವಕಾಶವನ್ನು ಸಾರ್ವಜನಿಕರು ಬಳಸಿಕೊಳ್ಳುವಂತೆ ತಂಡ ವಿನಂತಿಸಿದೆ.
ಈ ಬಾರಿ ರಾಜ್ ಟವರ್ಸ್‌ಗೂ ದರ್ಪಣ ಮಹಿಳಾ ಪಿಲಿ ತಂಡ ಭೇಟಿ ನೀಡಲಿದ್ದು, ರಾಜ್ ಟವರ್ಸ್ ತಮ್ಮ ತಂಡಕ್ಕೆ ಎರಡನೇ ಮನೆಯಂತಿದೆ ಎಂದು ತಂಡದ ಸದಸ್ಯರು ಆತ್ಮೀಯವಾಗಿ ತಿಳಿಸಿದ್ದಾರೆ.
ಹುಲಿವೇಷದ ಕಲಾ ಸಂಭ್ರಮವನ್ನು ಸಾಮಾಜಿಕ ಕಳಕಳಿಯೊಂದಿಗೆ ಬೆಸೆದುಕೊಂಡಿರುವ ದರ್ಪಣ ಮಹಿಳಾ ಪಿಲಿ ತಂಡದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸ ವ್ಯಕ್ತವಾಗಿದೆ.
“ಬನ್ನಿ… ಹುಲಿವೇಷದ ಸಂಭ್ರಮದ ಜೊತೆಗೆ, ಒಂದು ಒಳ್ಳೆಯ ಕಾರ್ಯದಲ್ಲೂ ಭಾಗಿಯಾಗೋಣ” ಎಂಬ ಸಂದೇಶದೊಂದಿಗೆ ತಂಡವು ಸಾರ್ವಜನಿಕರಿಗೆ ಕರೆ ನೀಡಿದೆ.

