Wednesday, July 24, 2024
Homeರಾಜ್ಯರಾಯಚೂರು | ಬಿಸಿಲಿನ ಝಳಕ್ಕೆ ಒಂದೇ ದಿನ ಐವರು ಬಲಿ; ಕಾರಿಗೆ ಬೆಂಕಿ

ರಾಯಚೂರು | ಬಿಸಿಲಿನ ಝಳಕ್ಕೆ ಒಂದೇ ದಿನ ಐವರು ಬಲಿ; ಕಾರಿಗೆ ಬೆಂಕಿ

ರಾಯಚೂರು: ಬಿಸಿಲಿನ ಝಳಕ್ಕೆ ತತ್ತರಿಸಿರುವ ರಾಯಚೂರಿನ ಜನರು ಮನೆಯಿಂದ ಹೊರಹೋಗಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಕಳೆದ 24 ಗಂಟೆಗಳಲ್ಲಿ ಐವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇನ್ನೊಂದೆಡೆ ಶಕ್ತಿನಗರದಲ್ಲಿ ಶುಕ್ರವಾರ ಕಾರೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಡಾ ಗ್ರಾಮದಲ್ಲಿ ಗರಿಷ್ಠ ಉಷ್ಠಾಂಶ 45 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಪ್ರಖರ ಬಿಸಿಲು ಹಾಗೂ ನಿರ್ಜಲೀಕರಣದಿಂದ ನಾಲ್ವರು ಸಾವನ್ನಪ್ಪಿದ್ದಾರೆ.

ಹಳ್ಳಕ್ಕೆ ಬಟ್ಟೆ ಹೊಳೆಯಲು ಹೋದಾಗ ಸಂಜೆ ವೇಳೆ 50 ವರ್ಷದ ವೀರೇಶ ಹನುಮಂತಪ್ಪ ಮಡಿವಾಳ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. 60ರ ಹರೆಯದ ಗಂಗಮ್ಮ, 15ರ ಹರೆಯದ ಪ್ರದೀಪ ತಮ್ಮಣ್ಣ ಪೂಜಾರಿ ಹಾಸಿಗೆಯಲ್ಲೇ ನಿಧನರಾಗಿದ್ದಾರೆ. 60ರ ಹರೆಯದ ದುರ್ಗಮ್ಮ ಹನುಮಂತಪ್ಪ ಉಪ್ಪಾರ್ ನಿಧನರಾಗಿದ್ದಾರೆ.

ರಾಯಚೂರು ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಮನೆಗೆ ಬರುತ್ತಿದ್ದ 45ರ ಹರೆಯದ ಹನುಮಂತ ಮೃತಪಟ್ಟಿದ್ದಾರೆ. ಬೆಳಗ್ಗೆ ಹೊಲದಿಂದ ಬರುವಾಗ ದಾರಿಯಲ್ಲೇ ಇದ್ದ ಮಂದಿರಕ್ಕೆ ತೆರಳಿ, ಮನೆಗೆ ಬಂದು ನೀರು ಕೇಳಿದ್ದಾರೆ. ನೀರು ಕುಡಿಯುವಷ್ಟರಲ್ಲಿ ಕುಸಿದುಬಿದ್ದಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.

ಕೆಲವರು ಅನಾರೋಗ್ಯದಿಂದ ಮೃತಪಟ್ಟಿರುವ ಸಾಧ್ಯತೆಯಿದೆ. ಮೂವರು ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆಯಿದೆ. ಈ ಬಗ್ಗೆ ವೈದ್ಯಕೀಯ ತಂಡ ಪರಿಶೀಲಿಸುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಶ್ ಬಾಬು ಹೇಳಿದ್ದಾರೆ.

ರಾಯಚೂರು ತಾಲೂಕಿನ ಶಕ್ತಿನಗರದ ವೈಟಿಪಿಎಸ್ ಮುಂಭಾಗ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಚಾಲಕ ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ಕಾರು ಹೊತ್ತಿ ಉರಿದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular