ಕಲ್ಬುರ್ಗಿಯಲ್ಲಿ ದಾರುಣವಾದ ಘಟನೆಯೊಂದು ನಡೆದಿದ್ದು, ಬಿಸಿ ನೀರಿದ್ದ ಬಕೆಟ್ ಗೆ ಐದು ವರ್ಷದ ಹೆಣ್ಣು ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ನಗರದ ತಾಜ್ ನಗರದಲ್ಲಿ ನಡೆದಿದೆ.ಕಳೆದ ನವೆಂಬರ್ 12 ರಂದು ಈ ಘಟನೆ ನಡೆದಿದ್ದು ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ, ಆಫ್ರೀನ್ ಬಾನು (5) ಸಾವನ್ನಪ್ಪಿದ್ದಾಳೆ.
ತಾಜ್ ನಗರದ ಮಹಮದ್ ಗೌಸ್ ಮತ್ತು ತಾಹೇರ ಬಾನು ದಂಪತಿ ಪುತ್ರಿ ಆಫ್ರೀನ್ ಬಾನು ಎಂದು ತಿಳಿದುಬಂದಿದ್ದು, ನವೆಂಬರ್ 12ರ ಸಂಜೆ ಸ್ನಾನ ಮಾಡಲು ತಾಹೇರ ಅವರು ಬಕೆಟ್‌ನಲ್ಲಿ ನೀರು ಹಾಕಿ ವಾಟರ್ ಹೀಟರ್ ಹಚ್ಚಿ ಬಿಸಿ ಮಾಡಿದ್ದರು.
ನೀರು ಬಿಸಿಯಾದ ಬಳಕ ವಾಟರ್ ಹೀಟರ್ ಬಂದ್ ಮಾಡಿದ್ದರು. ಮೂವರೂ ಮಕ್ಕಳು ಅಲ್ಲಿಯೇ ಆಟವಾಡುತ್ತಿದ್ದರು. ಒಳಗೆ ಹೋಗಿ ಬಟ್ಟೆ ತರುವ ವೇಳೆಗೆ ಆಫ್ರೀನಾ ಬಾನು ಬಿಸಿ ನೀರಿನ ಬಕೆಟ್‌ನಲ್ಲಿ ಬಿದ್ದಳು. ದೇಹದಲ್ಲಿ ಭಾಗಶಃ ಸುಟ್ಟ ಗಾಯಗಳಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಕಳೆದ ಎರಡು ದಿನಗಳ ಹಿಂದೆ ಮಗಳಿಗೆ ಗುಣವಾಗಿದೆ ಎಂದು ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಮರುದಿನವೇ ಪದೇ ಪದೇ ವಾಂತಿ- ಭೇದಿ ಮಾಡಿಕೊಂಡಳು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.