ಮಂಗಳೂರು: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ದಾಖಲೆ ಸಂಖ್ಯೆಯ ಮದುವೆ ಕಾರ್ಯ ಜರುಗಿತು. ಭಾನುವಾರ ಒಂದೇ ದಿನ 74 ಜೋಡಿಗಳು ಹಸೆಮಣೆ ಏರಿದವು. ಸರಳ ವಿವಾಹ ಹಾಗೂ ಹರಕೆ ಹೊತ್ತು ಇಲ್ಲಿ ಮದುವೆಗಳಾಗುತ್ತವೆ. ಬೇಸಿಗೆ ರಜೆ ಮತ್ತು ಶುಭ ಮುಹೂರ್ತಗಳಲ್ಲಿ ಶ್ರೀ ದೇವಿಯ ಮುಂದೆ ತಾಳಿ ಕಟ್ಟುವ ಸಂಕಲ್ಪ ನೂರಾರು ಜನ ಮಾಡಿರುತ್ತಾರೆ. ಆ ಪ್ರಕಾರ ಇಲ್ಲಿ ಬಂದು ತಾಳಿ ಕಟ್ಟುವ ಸಂಪ್ರದಾಯ ನಡೆಯುತ್ತದೆ. ಅಲ್ಲಿಂದ ಬಳಿಕ ತಮ್ಮ ಊರುಗಳಲ್ಲಿ ಆರತಕ್ಷತೆ ಇಟ್ಟುಕೊಳ್ಳುವವರೂ ಇರುತ್ತಾರೆ.
ಕೋವಿಡ್ ಪೂರ್ವದಲ್ಲಿ 2019ರಲ್ಲಿ ಇಡೀ ವರ್ಷದಲ್ಲಿ 142 ಜೋಡಿ ಇಲ್ಲಿ ವಿವಾಹವಾಗಿದ್ದವು. ಆ ವರ್ಷ ಮೇ 19ರಂದು ಒಂದೇ ದಿನ 72 ಮದುವೆಗಳು ಇಲ್ಲಿ ನಡೆದಿದ್ದವು. ಇದೀಗ 5 ವರ್ಷಗಳ ಬಳಿಕ ಮತ್ತೊಮ್ಮೆ ದಾಖಲೆಯ ಮದುವೆ ಒಂದೇ ದಿನ ನಡೆದಿದೆ.
ನೂತನ ವಧು ವರರ ಸಂಬಂಧಿಗಳು ಪರಸ್ಪರ ದಿಬ್ಬಣವನ್ನು ಆಹ್ವಾನಿಸಿಕೊಳ್ಳಲು ದೇವಳದ ಹೊರಭಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ದೇವಳದ ಮುಂಭಾಗದ ಅಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅರ್ಚಕರು ಮಂತ್ರ ಪಠಿಸಿದಂತೆ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡಿದರು. ಹೆಚ್ಚು ಜೋಡಿ ವಿವಾಹವಿದ್ದುದರಿಂದ, ಜನದಟ್ಟಣೆಯೂ ಇತ್ತು. ಆದರೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ರೂಪಿಸಿದ್ದರಿಂದ ಹೆಚ್ಚಿನ ಅಡಚಣೆ ಏನೂ ಉಂಟಾಗಲಿಲ್ಲ.