ದಾವಣಗೆರೆ: ಒಂದೇ ಗ್ರಾಮದಲ್ಲಿ ಒಂದೇ ದಿನ ಎಂಟು ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ಪ್ರತಿಭಟಿಸಿದ ಘಟನೆ ನಡೆದಿದೆ. ದಾವಣಗೆರೆಯ ಹೊಸ ಕುಂದುವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ಗುರುವಾರ ಒಂದೇ ದಿನ ಮಗುವೊಂದು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. 3,000 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಮಾರಜ್ಜಿ (60) ಎಂಬವರು ವಯೋ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಸಂತೋಷ್ (32) ವಾಂತಿ ಭೇದಿಯಿಂದ, ಈರಮ್ಮ (65) ಜ್ವರದಿಂದ, ಭೀಮಕ್ಕ (60) ವಾಂತಿ ಭೇದಿಯಿಂದ, ಸುನಿಲ್ (25) ಜ್ವರದಿಂದ, ಶಾಂತಮ್ಮ (65) ವಯೋ ಸಹಜ ಕಾಯಿಲೆಯಿಂದ ಹಾಗೂ 3 ದಿನದ ಮಗು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.
ಶವಸಂಸ್ಕಾರ ಮಾಡಲು ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡಿದರು. ಸ್ಮಶಾನಕ್ಕಾಗಿ ಈ ಹಿಂದೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಆದ್ದರಿಂದ ಸ್ಮಶಾನಕ್ಕಾಗಿ ಆಗ್ರಹಿಸಿ ಇಡೀ ಗ್ರಾಮಸ್ಥರು ಸೇರಿ ಪ್ರತಿಭಟನೆ ನಡೆಸಿದರು.