ಕೊಚ್ಚಿ: ವಿಷಾಹಾರ ಸೇವಿಸಿ 80 ವಿದ್ಯಾರ್ಥಿಗಳು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಕೇರಳದ ವಿವಿಧ ಕಾಲೇಜುಗಳ ಸುಮಾರು 600 ಕೆಡೆಟ್‌ಗಳು ಪಾಲ್ಗೊಂಡಿದ್ದ ತೃಕ್ಕಾಕರ ಎನ್‌ಸಿಸಿ ಶಿಬಿರವನ್ನು ಮಂಗಳವಾರ ಮುಂಜಾನೆ ಸ್ಥಗಿತಗೊಳಿಸಲಾಗಿದೆ.
ಇಲ್ಲಿನ ತೃಕ್ಕಾಕರದ ಕೆಎಂಎಂ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್‌ಸಿಸಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಸೋಮವಾರ ಸಂಜೆ ಅತಿಸಾರ ಕಾಣಿಸಿಕೊಂಡಿದೆ. ತಕ್ಷಣವೇ ಅವ ಕಲಮಸ್ಸೆರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇತರ ಎರಡು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಶಿಬಿರದಲ್ಲಿ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 80 ವಿದ್ಯಾರ್ಥಿಗಳಲ್ಲಿ ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿರುವುದಾಗಿ ಶಂಕಿಸಲಾಗಿದೆ.
ತೃಕ್ಕಾಕರ ಪುರಸಭೆಯ ಆರೋಗ್ಯಾಧಿಕಾರಿ ಈ ಬಗ್ಗೆ ಪ್ರತಿಕ್ರಿಯಿಸಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾಲೇಜಿನಲ್ಲಿ ನೀಡುತ್ತಿರುವ ಆಹಾರ ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಯಾವುದೇ ವಿದ್ಯಾರ್ಥಿಗಳ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.
ತೃಕ್ಕಾಕರ ಪುರಸಭೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ಸಾಮೂಹಿಕವಾಗಿ ಆಸ್ಪತ್ರೆಗೆ ದಾಖಲಾದ ನಂತರ ಪೋಷಕರು ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಶಿಬಿರವನ್ನು ಸ್ಥಗಿತಗೊಳಿಸಲಾಯಿತು ಎಂದು ಹೇಳಿದ್ದಾರೆ.