Sunday, July 14, 2024
Homeಪುತ್ತೂರುಕಾಡಿನಲ್ಲಿ 6 ದಿನ ನಾಪತ್ತೆಯಾದ 83ರ ಹರೆಯದ ವ್ಯಕ್ತಿ: ಕೊನೆಗೂ ಸುರಕ್ಷಿತವಾಗಿ ಪತ್ತೆಹಚ್ಚಿದ ಶೌರ್ಯ ತಂಡ

ಕಾಡಿನಲ್ಲಿ 6 ದಿನ ನಾಪತ್ತೆಯಾದ 83ರ ಹರೆಯದ ವ್ಯಕ್ತಿ: ಕೊನೆಗೂ ಸುರಕ್ಷಿತವಾಗಿ ಪತ್ತೆಹಚ್ಚಿದ ಶೌರ್ಯ ತಂಡ

ಬೆಳ್ತಂಗಡಿ: ಕಟ್ಟಿಗೆ ತರಲೆಂದು ಕಾಡಿಗೆ ತೆರಳಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ಆರು ದಿನ ಕಾಡಿನಲ್ಲೇ ಸಿಲುಕಿ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಶಿಬಾಜೆ ಗ್ರಾಮದ ಐಂಗುಡ ನಿವಾಸಿ 83 ವರ್ಷದ ವಾಸು ರಾಣ್ಯ ಕಾಡಿನಲ್ಲೇ ಆರು ದಿನ ಕಳೆದಿದ್ದಾರೆ.

ಮೇ 21ರಂದು ಬೆಳಿಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು ಮನೆ ಪಕ್ಕದ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದೆಂದು ಮನೆಯವರು ಸುಮ್ಮನಿದ್ದರು. ಆದರೆ ಎಷ್ಟು ಹೊತ್ತಾದರೂ ಮನೆಗೆ ಹಿಂದಿರುಗದ್ದನ್ನು ಕಂಡು, ಸ್ಥಳೀಯರಿಗೆ ಮಾಹಿತಿ ನೀಡಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಹೀಗೆ ಐದು ದಿನ ಸುತ್ತಮುತ್ತಲೆಲ್ಲಾ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ.

ಭಾನುವಾರ ಬೆಳಿಗ್ಗೆ ಆಡು ಮೇಯಿಸಲೆಂದು ಮನೆಯವರು ಸಮೀಪದ ಗುಡ್ಡೆಗೆ ತೆರಳಿದ್ದಾಗ ಅಲ್ಲಿ ಕೂ ಕೂ ಎಂಬ ಶಬ್ದ ಕೇಳಿಬಂತು. ಈ ಸದ್ದನ್ನು ಅನುಸರಿಸಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದರು. ಬಳಿಕ ಭಂಡಿಹೊಳೆ ಕಾಡಿನ ಸುಮಾರು 2.5 ಕಿ.ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ.

ನಂತರ ಅವರನ್ನು ರಕ್ಷಿಸಿ ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮನ್ನು ಯಾರೋ ಬಾ.. ಬಾ.. ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ ಎಂದು ವಾಸು ಹೇಳಿದ್ದಾರೆ ಎನ್ನಲಾಗಿದೆ. ಆರು ದಿನ ಕಾಡಿನಲ್ಲಿ ಇವರು ಆಹಾರವನ್ನೇನೂ ಸೇವಿಸಿಲ್ಲ, ನೀರು ಮಾತ್ರ ಸೇವಿಸುತ್ತಿದ್ದರು ಎನ್ನಲಾಗಿದೆ.

ವಾಸು ನಾಪತ್ತೆಯಾಗಿದ್ದ ಪ್ರದೇಶದಲ್ಲಿ ಭಾರೀ ಗುಡುಗು ಮಿಂಚು ಸಹಿತ ಮಳೆ ಸುರಿದಿದೆ. ಆದರೂ ಅವರು ಕಾಡಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.

ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆಮ ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು ಮತ್ತು ಸ್ಥಳೀಯರಾದ ಗೋವಿಂದ, ಗಣೇಶ, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ್, ವಾಸು ರಾಣ್ಯದ ಪುತ್ರರಾದ ಕಮಲಾಕ್ಷ, ಸುರೇಶ್ ಮತ್ತು ಅವರ ಕುಟುಂಬಸ್ಥರು ವಾಸು ರಾಣ್ಯರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular