ಶಿರ್ವ, ಎ. 16: ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲದ ಶಿಲಾಮಯ ಗರ್ಭಗೃಹದ ನೂತನ ದೇಗುಲದ ಸಮರ್ಪಣೆ, ಪುನಃಪ್ರತಿಷ್ಠಾ ಅಷ್ಟಬಂಧ, ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಸಗ್ರಿ ಹರಿದಾಸ ಐತಾಳ ಅವರ ನೇತೃತ್ವದಲ್ಲಿ ಎ. 18ರಿಂದ 29ರ ವರೆಗೆ ನಡೆಯಲಿದೆ.
ಹೊರೆ ಕಾಣಿಕೆ ಮೆರವಣಿಗೆ
ಎ. 19ರಂದು ಸಾಯಂಕಾಲ 4ಗಂಟೆಗೆ ಮೂಡುಬೆಳ್ಳೆ ಗೀತಾ ಮಂದಿರದಿಂದ ವಿವಿಧ ಕಲಾತಂಡಗಳ ವಿಶೇಷ ಆಕರ್ಷಣೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ವೈಭವದ ಹಸುರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಎ. 18ರಂದು ಸಾಯಂಕಾಲ ಋತ್ವಿ ಜರ ಸ್ವಾಗತದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದ್ದು, ಎ. 21ರಂದು ಬೆಳಗ್ಗೆ 5.50ಕ್ಕೆ ಶ್ರೀ ಮಹಾಲಿಂಗೇಶ್ವರ,ಶ್ರೀ ಸೂರ್ಯನಾರಾಯಣ ಮಹೋತ್ಸವ ಹಾಗೂ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ಅಷ್ಟಬಂಧ ಪ್ರತಿಷ್ಠೆ ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ 109 ಕಲಶಾಭಿಷೇಕ, ಶ್ರೀ ಧೂಮಾವತಿ ಮತ್ತು ಬಂಟ ದೈವ ಪ್ರತಿಷ್ಠೆ ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯಲಿದೆ.
ಎ. 23ರಂದು ಶ್ರೀ ಸೂರ್ಯ ನಾರಾಯಣ ದೇವರಿಗೆ 109 ಕಲಶಾಭಿಷೇಕ, ಶ್ರೀ ಮಹಾಲಿಂಗೇಶ್ವರ ದೇವರಿಗೆ ತತ್ವಕಲಶಾಭಿಷೇಕ, ಎ. 24ರಂದು ಬೆಳಗ್ಗೆ 10.10ಕ್ಕೆ 1008 ಕಲಶ ಸಹಿತ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮ ಕಲಶಾಭಿಷೇಕ,ಮಧ್ಯಾಹ್ನ ಅನ್ನಸಂತರ್ಪಣೆ, ಎ. 25 ರಂದು ಬೆಳಗ್ಗೆ ಧ್ವಜಾ ರೋಹಣ, ಎ. 27 ರಂದು ವಾರ್ಷಿಕ , ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕವಾಟಬಂಧನ, ಶಯನೋತ್ಸವ, ಎ. 28ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಅವಭ್ರಥ, ಧ್ವಜಾವರೋಹಣ, ರಾತ್ರಿ ಶ್ರೀ ಧೂಮಾವತಿ ಬಂಟ ದೈವದ ಕೋಲ ಹಾಗೂ ಎ. 29ರಂದು ಬೆಳಗ್ಗೆ ಮಹಾಸಂಪ್ರೋಕ್ಷಣೆ ಮಹಾಮಂತ್ರಾಕ್ಷತೆ ನಡೆಯಲಿದೆ.
ಧಾರ್ಮಿಕ ಸಭೆ
ಎ. 23ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀ ಪಾದರು ದೀಪ ಬೆಳಗುವರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಎಚ್.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಿದ್ವಾನ್ ರವೀಂದ್ರನಾಥ್ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡುವರು.
ಎ. 21ರಿಂದ 27ರ ವರೆಗೆ ಪ್ರತೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜೀರ್ಣೋದ್ದಾರ ಸಮಿತಿ ಮತ್ತು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.