ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ವತಿಯಿಂದ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ ‘ಕಂಬಳ ಕೂಟ’ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಇದೇ 19ರಂದು ಶನಿವಾರ ಬೆಳಿಗ್ಗೆ ಗಂಟೆ 8.30ರಿಂದ ರಾತ್ರಿ ಗಂಟೆ 10.30 ರತನಕ ನಡೆಯಲಿದೆ ಎಂದು ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಹೇಳಿದರು. ಇಲ್ಲಿನ ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಂದು ಬೆಳಿಗ್ಗೆ 8.30 ಗಂಟೆಗೆ ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ ಆಚಾರ್ಯ ಕಂಬಳ ಕರೆ ಉದ್ಘಾಟಿಸುವರು. ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ದೀಪ ಪ್ರಜ್ವಲನೆ ಮೂಲಕ ಕಂಬಳ ಕೂಟಕ್ಕೆ ಚಾಲನೆ ನೀಡುವರು’ ಎಂದರು. ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ್, ನಿಯೋಜಿತ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ರೋಟರಿ ಜಿಲ್ಲಾ ಕಾರ್ಯದಶರ್ಿ ರಿತೇಶ್ ಬಾಳಿಗಾ, ಸಹಾಯಕ ಗವರ್ನರ್ ಡಾ.ಮುರಳಿಕೃಷ್ಣ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ವಲಯ ಸೇನಾನಿ ಗಣೇಶ ಶೆಟ್ಟಿ, ಸಿದ್ದಕಟ್ಟೆ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರ ಗಣ್ಯರು ಭಾಗವಹಿಸುವರು. ಮಧ್ಯಾಹ್ನ ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದಶರ್ಿ ಲೋಕೇಶ ಶೆಟ್ಟಿ ಮುಚ್ಚೂರು ಮತ್ತಿತರ ಪದಾಧಿಕಾರಿಗಳು ಭಾಗವಹಿಸುವರು ಎಂದರು. ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮಾತನಾಡಿ, ‘ರೋಟರಿ ಸಂಸ್ಥೆಯು ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಕರಾವಳಿ ಜಾನಪದ ಕ್ರೀಡೆ ಕಂಬಳ ಕೂಟ ನಡೆಸಿ, ಸಬ್ ಜ್ಯೂನಿಯರ್ ವಿಭಾಗದ ಕೋಣಗಳಿಗೆ ಸ್ಪರ್ದೆ ನೀಡಲು ಸೂಕ್ತ ಅವಕಾಶ ಒದಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳನ್ನು ಸಾಕುವುದರ ಜೊತೆಗೆ ಸಾಂಪ್ರ್ರದಾಯಿಕ ಮತ್ತು ಸಾವಯವ ಕೃಷಿಗೆ ಪ್ರೇರಣೆ ಸಿಗುತ್ತದೆ. ಈ ಬಾರಿ ವಿಜೇತ ಕೋಣಗಳ ಮಾಲೀಕರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಚಿನ್ನದ ಪದಕ, ತೃತೀಯ ಮತ್ತು ಚತುರ್ಥ ಬಹುಮಾನ ತಲಾ ರೂ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುತ್ತಿದ್ದು, ಭಾಗವಹಿಸುವ ಎಲ್ಲರಿಗೂ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್ಬಿನ ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ, ಸದಸ್ಯ ಮೋಹನ್ ಕೆ.ಶ್ರೀಯಾನ್ ರಾಯಿ ಉಪಸ್ಥಿತರಿದ್ದರು.