ಬೆಳಗಾವಿ: ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಬೆಳಗಾವಿಯ ಗಣೇಶಪುರದ ಹಿಂದು ನಗರದ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಶಾಹುನ ನಗರದ ನಿವಾಸಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಿ, ಪ್ರಪುಲ್ ಬಾಲಕೃಷ್ಣ ಪಾಟೀಲ (30) ಎಂಬವರು ದುಷ್ಕರ್ಮಿಗಳ ದಾಳಿಗೊಳಗಾದವರು. ದಾಳಿ ವೇಳೆ ಕಾರಿನ ಗ್ಲಾಸ್ಗೆ ಗುಂಡು ತಗುಲಿದ್ದು, ಅದೃಷ್ಟವಶಾತ್ ಪ್ರಪುಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರಿನ ಗಾಜು ಪ್ರಪುಲ್ ಅವರ ತಲೆ, ಮುಖಕ್ಕೆ ಸಿಡಿದು ಗಾಯವಾಗಿದೆ. ತಕ್ಷಣ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಎರಡು ಸುತ್ತು ಗುಂಡಿನ ದಾಳಿ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.