ಸಿಕಾರ್: ಟ್ರಕ್ ಗೆ ಕಾರೊಂದು ಡಿಕ್ಕಿ ಹೊಡೆದು, ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿದ್ದಾರೆ. ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಮೃತರನ್ನು ನೀಲಂ ಗೋಯಲ್, ಅವರ ಮಗ ಆಶುತೋಷ್ ಗೋಯಲ್, ಮಂಜು ಬಿಂದಾಲ್, ಅವರ ಮಗ ಹಾರ್ದಿಕ್ ಬಿಂದಾಲ್, ಅವರ ಪತ್ನಿ ಸ್ವಾತಿ ಬಿಂದಾಲ್ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.
ಉತ್ತರ ಪ್ರದೇಶದ ಮೀರತ್ ನಿವಾಸಿಗಳಾದ ಇವರು ರಾಜಸ್ಥಾನದ ಸಲಾಸರ್ ನಲ್ಲಿರುವ ಸಲಾಸರ್ ಬಾಲಾಜಿ ದೇವಸ್ಥಾನಕ್ಕೆ ತೆರಳಿ ಹಿಂದಿರುಗುತ್ತಿದ್ದರು. ಟ್ರಕ್ಕನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅವಘಡ ಸಂಭವಿಸಿದೆ. ಟ್ರಕ್ ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಇನ್ನೊಂದು ವಾಹನ ಬಂದಿದ್ದು, ಅಪಘಾತ ಸಂಭವಿಸುವ ಯತ್ನದಲ್ಲಿ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಎಲ್ ಪಿಜಿ ಕೆಟ್ ಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಟ್ರಕ್ ನಲ್ಲಿ ತುಂಬಿದ್ದ ಹತ್ತಿ ಬೆಂಕಿಯನ್ನು ಇನ್ನಷ್ಟು ಆವರಿಸುವಂತೆ ಮಾಡಿದೆ. ಕಾರಿನ ಲಾಕ್ ತೆಗೆಯಲು ಸಾಧ್ಯವಾಗದೆ ಕಾರಿನಲ್ಲಿದ್ದ ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಯತ್ನಿಸಿದರು. ಬೆಂಕಿ ನಂದಿಸುವ ಹೊತ್ತಿಗೆ ಕಾರಿನಲ್ಲಿದ್ದವರೆಲ್ಲಾ ಮೃತಪಟ್ಟಿದ್ದರು.