ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಲವ್ ಜಿಹಾದ್ ಎನ್ನಲಾದ ಪ್ರಕರಣವೊಂದು ಬಹಿರಂಗಗೊಂಡ ಬೆನ್ನಿಗೇ ಮಂಗಳೂರಿನಲ್ಲಿ ಅನ್ಯಕೋಮಿನ ಯುವಕನೊಬ್ಬ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣವೂ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಿಂಗಳಾಡಿ ಎಂಬಲ್ಲಿ ಪ್ರಕರಣ ನಡೆದಿದೆ.ಓಲೆಮುಂಡೋವು ನಿವಾಸಿ ಬದ್ರುದ್ದೀನ್ ಎಂಬಾತನೇ ಆರೋಪಿ. ಈತ ದಿನಸಿ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದ ಎನ್ನಲಾಗಿದೆ. ಆಗ ಮಹಿಳೆ ಬೊಬ್ಬೆ ಹಾಕಿದ್ದರಿಂದ ಆತ ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ.

ವಿಷಯ ಎಲ್ಲೆಡೆ ಹಬ್ಬುತ್ತಿದ್ದಂತೆ ಹಿಂದೂ ಸಂಘಟನೆಗಳ ಸದಸ್ಯರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ನಾಳೆ ಬೆಳಗ್ಗೆ ಒಳಗೆ ಬಂಧಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಕೂಡ ಆರೋಪಿಯನ್ನು ಬಂಧಿಸುವಂತೆ ಪೋಲೀಸರಿಗೆ ಸೂಚಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.