ಹೈದರಾಬಾದ್: ತೆಲಂಗಾಣದ ಸರ್ಕಾರಿ ವೈದ್ಯಕೀಯ ಕಾಲೇಜು ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಕ್ಷೌರಿಕನ ಅಂಗಡಿಗೆ ಕರೆದೊಯ್ದು, ಅವನ ತಲೆ ಬೋಳಿಸಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ವಿದ್ಯಾರ್ಥಿಯ ತಲೆ ಬೋಳಿಸಿದ್ದಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧ್ಯಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ನವೆಂಬರ್ 12ರಂದು ನಡೆದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೆಲಂಗಾಣ ಆರೋಗ್ಯ ಸಚಿವ ದಾಮೋದರ್ ರಾಜ ನರಸಿಂಹ ಅವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಇದು ರ್ಯಾಗಿಂಗ್ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ತೆಲಂಗಾಣ ಸರ್ಕಾರದ ಅಧಿಕಾರಿಗಳ ಪ್ರಕಾರ, ಆರಂಭದಲ್ಲಿ ಸಂಸ್ಥೆಯ ಹಾಸ್ಟೆಲ್‌ನಲ್ಲಿರುವ ಕೆಲವು ಸೀನಿಯರ್ಗಳು ಮೊದಲ ವರ್ಷದ ವಿದ್ಯಾರ್ಥಿಯ ಹೇರ್ಸ್ಟೈಲ್ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗೆ ಇರಬೇಕಾದ ಹಾಗಿಲ್ಲ ಎಂದು ಹೇಳಿದರು. ಆತನಿಗೆ ಕೂದಲು ಟ್ರಿಮ್ ಮಾಡಲು ಸೂಚಿಸಿದರು.
ವಿದ್ಯಾರ್ಥಿಯು ತನ್ನ ಕೂದಲನ್ನು ಟ್ರಿಮ್ ಮಾಡಿದ ನಂತರ ಹಾಸ್ಟೆಲ್ ಉಸ್ತುವಾರಿಯಾಗಿದ್ದ ಆ ಕಾಲೇಜಿನ ಉಪನ್ಯಾಸಕ ಈ ಹೇರ್ಸ್ಟೈಲ್ ವಿಚಿತ್ರವಾಗಿದೆ ಎಂದು ಹೇಳಿ ಆತನನ್ನು ಸಲೂನ್‌ಗೆ ಕರೆದೊಯ್ದು ತಲೆ ಬೋಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ಬಂದ ನಂತರ, ಶನಿವಾರ ಆ ಉಪನ್ಯಾಸಕರನ್ನು ಹಾಸ್ಟೆಲ್‌ನಿಂದ ತೆಗೆದುಹಾಕಲು ಆದೇಶಿಸಿದರು. ಈ ಘಟನೆಯ ಕುರಿತು ತನಿಖೆಗಾಗಿ ಸಮಿತಿಯನ್ನು ಸಹ ರಚಿಸಿದರು.
ಸಹಾಯಕ ಪ್ರಾಧ್ಯಾಪಕರು ಇಂತಹ ಚಟುವಟಿಕೆಯಲ್ಲಿ ತೊಡಗುವುದು ಒಳ್ಳೆಯದಲ್ಲ ಎಂದು ಪ್ರಾಂಶುಪಾಲರು ಹೇಳಿದರು. ಆದರೆ, ಆ ಉಪನ್ಯಾಸಕರ ಪ್ರಕಾರ, ಆ ವಿದ್ಯಾರ್ಥಿಯನ್ನು ಶಿಸ್ತುಬದ್ಧಗೊಳಿಸುವುದು ಮಾತ್ರ ಅವರ ಉದ್ದೇಶವಾಗಿತ್ತು. ಹೀಗಾಗಿ, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.