ಕಾಪು: ಆಹಾರದಲ್ಲಿ ವಿಷ ಹಾಕಿ ಸಾಕು ನಾಯಿಯನ್ನು ಕೊಂದಿರುವುದಾಗಿ ನಾಯಿಯ ಪೋಷಕಿ ಸಾಮಾಜಿಕ ಕಾರ್ಯಕರ್ತೆ ಮಣಿಪುರ ಬಡಗುಮನೆಯ ಬಿಂದು ಶೆಟ್ಟಿ ಅವರು, ಕಾಪು ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಸಲಿಸಿದ್ದಾರೆ. ಫೆ.21 ಶುಕ್ರವಾರ, ರಾತ್ರಿ 11.00 ಗಂಟೆಯಿಂದ ಫೆ. 22 ರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ನಾಯಿಗೆ ವಿಷ ಪದಾರ್ಥ ಹಾಕಿ ಕೊಂದಿರುವುದಾಗಿ ದೂರಲಾಗಿದೆ. ಮೃತ ನಾಯಿಯ ಕಳೇಬರವನ್ನು ವಾರಸುದಾರರು ಮನೆಯ ವಠಾರದಲ್ಲಿ ದಫನ ನಡೆಸಿದ್ದರು. ದೂರು ದಾಖಲಾದ ಕಾರಣ ಕಾನೂನು ಪ್ರಕ್ರಿಯೆ, ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕಾಯಿತು. ಹಾಗಾಗಿ ಹೆಡ್ ಕಾನ್ಸಟೇಬಲ್ಗಳಾದ ಅರುಣ್ ಉಪ್ಪೂರು, ಜಗನಾಥ್ ನಾಯ್ಕ್ ಹಾಗೂ ಪ್ರಾಣಿ ದಯಾ ಸಂಘದ ಮಂಜುಳ ಅವರ ಸಮಕ್ಷಮದಲ್ಲಿ ನಾಯಿಯ ಕಳೇಬರವನ್ನು ಗುಂಡಿಯಿಂದ ಮೇಲ್ಕೆತ್ತಲಾಯಿತು.
ಶ್ವಾನದ ಕಳೇಬರ ಕೆಡದಂತೆ ಸುರಕ್ಷಿತ ವಿಧಾನದಲ್ಲಿ ರಕ್ಷಿಸಿಡಬೇಕಾಯಿತು. ಈ ಸಂದರ್ಭ ಕಾಪು ಪೋಲಿಸರು ಸಮಾಜ ಸೇವಕ ನಿತ್ಯಾನಂದ ಒಳಕಾಡುವರ, ನೆರವು ಪಡೆದರು. ಪೋಲಿಸರು ಬಿಂದು ಶೆಟ್ಟಿಯವರಿಗೆ ನಾಯಿಯ ಕಳೇಬರವನ್ನು ಮಣಿಪಾಲದಲ್ಲಿರುವ ಸಮಾಜ ಸೇವಕ ಒಳಕಾಡುವರ ಮನೆಗೆ ಕಂಡ್ಯೊಲು ಸಲಹೆವಿತ್ತರು. ಒಳಕಾಡುವರು ನಾಯಿಯ ಕಳೇಬರವನ್ನು ಮನೆಯಲ್ಲಿರುವ ವಿದ್ಯುತ್ ಚಾಲಿತ ಶೀತಲೀಕೃತ ಪ್ರಾಣಿ ಕಳೇಬರ ರಕ್ಷಣಾ ಪೆಟ್ಟಿಗೆಯಲ್ಲಿ ರಕ್ಷಿಸಿಟ್ಟಿದ್ದರು. ಭಾನುವಾರ ಬೈಲೂರು ಪಶುಚಿಕಿತ್ಸಾ ಕೇಂದ್ರಕ್ಕೆ ಸಾಗಿಸಿದರು. ಪಶುವೈದ್ಯ ಡಾ. ಚಂದ್ರಶೇಖರ್ ಸಾಲಿಮಟ್ ಅವರಿಂದ ಮರಣೋತ್ತರ ಪರೀಕ್ಷೆ ನಡೆದಿದ್ದು ವರದಿ ಬರಬೇಕಿದೆ. ಪೊಲೀಸರಿಂದ ತನಿಖೆ ಮುಂದುವರಿದಿದೆ.