ಪ್ರೀತಿ ನಿರಾಕರಿಸಿದ 17 ವರ್ಷದ ಬಾಲಕಿಗೆ 21 ವರ್ಷದ ಪಾಗಲ್ ಪ್ರೇಮಿಯೊಬ್ಬ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ರಾಘವೇಂದ್ರ ಎಂದು ಗುರುತಿಸಲಾಗಿದ್ದು, ಬಾಲಕಿಗೆ ಸುಟ್ಟ ಗಾಯಗಳಾಗಿದ್ದು, ಸಾವು, ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಯುವಕ ಕಳೆದ ಸುಮಾರು ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ಯುವಕನನ್ನು ಪೊಲೀಸರು ಕಸ್ಟಡಿಗೆ ತಗೆದುಕೊಂಡಿದ್ದಾರೆ.
ಯುವಕ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಾಲಕಿಯ ಕೊಠಡಿಗೆ ನುಗ್ಗಿ ಬಾಗಿಲು ಹಾಕಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಆಕೆ ಸಹಾಯಕ್ಕಾಗಿ ಕಿರುಚುವುದನ್ನು ತಡೆಯಲು ಅವಳ ಬಾಯಿಯನ್ನು ಬಿಗಿದಿದ್ದಾನೆ. ಸಂತ್ರಸ್ತೆಗೆ ಮಾರಣಾಂತಿಕ ಸುಟ್ಟ ಗಾಯಗಳಾಗಿದ್ದು, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ರಾಘವೇಂದ್ರನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಬಾಲಕಿಗೆ ತೀವ್ರ ಸುಟ್ಟಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಫೋರೆನ್ಸಿಕ್ ತಂಡಗಳು ಅಪರಾಧ ನಡೆದ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪೊಲೀಸರು ಘಟನೆಯ ಬಗ್ಗೆ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ವಿ, ಪ್ರಕರಣದ ತನಿಖೆಗೆ ತಂಡಗಳ ರಚನೆಗೆ ಸೂಚನೆ ನೀಡಿದ್ದಾರೆ. ಮತ್ತು ತ್ವರಿತ ವಿಚಾರಣೆಯನ್ನು ನಡೆಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.