Wednesday, July 24, 2024
Homeತುಳು ಭಾಷೆಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ ಹೆಸರಿನಲ್ಲಿ ನಕಲಿ‌ ಖಾತೆ ತೆರೆದು ದೇಣಿಗೆ ಸಂಗ್ರಹ

ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ ಹೆಸರಿನಲ್ಲಿ ನಕಲಿ‌ ಖಾತೆ ತೆರೆದು ದೇಣಿಗೆ ಸಂಗ್ರಹ

ತುಳುನಾಡಿನಾದ್ಯಂತ ಹೆಚ್ಚು ಆರಾಧನೆಗೆ ಒಳಪಡುವ ದೈವವೆಂದರೆ ಅದು ಕೊರಗಜ್ಜ. ಕಳೆದು ಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲ ಮತ್ತು ಅಗ್ರಗಣ್ಯವಾಗಿ ಜನರು ನೆನಪಿಸಿಕೊಳ್ಳುವ ದೈವ ಈ ಕೊರಗಜ್ಜ. ಆದ್ರೆ, ಇದೀಗ ಕೆಲ ವಂಚಕರು ಇದೇ ಕೊರಗಜ್ಜನ ಹೆಸರಿನಲ್ಲಿ ಭಕ್ತರನ್ನು ವಂಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ‘ಡಿವೊಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಖಾತೆ ತೆರದು ಅದರಲ್ಲಿ ಅನ್ನದಾನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ತುಳುನಾಡಿನ ಕೊರಗಜ್ಜನ ಸನ್ನಿಧಾನಗಳಲ್ಲಿ‌ ಅತೀ ಹೆಚ್ಚು ಕಾರಣಿಕ ಹೊಂದಿರುವ, ಅತೀ ಹೆಚ್ಚು ಭಕ್ತರು ಬರುವ ಸ್ಥಳ ಇದೇ ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ. ಇಲ್ಲಿನ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್ ಸೈಟ್ ಎಂದು ಬಿಂಬಿಸುವಂತೆ ಈ ನಕಲಿ‌ ಖಾತೆ ತೆರೆಯಲಾಗಿದೆ. ಕೊರಗಜ್ಜನ ಫೋಟೋ ಹಾಕಿ ನಾವು‌ ಕಷ್ಟದಲ್ಲಿದ್ದೇವೆ ಕೊರಗಜ್ಜನ ಭಕ್ತರು ಸಹಾಯ ಮಾಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನಂಬಿ‌ ಅನೇಕ ಭಕ್ತರು ದೇಣಿಗೆ ನೀಡಿದ್ದಾರೆ. ಈ ವಿಚಾರ ದೈವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದರ ಜೊತೆ ದೈವಸ್ಥಾನದ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ರೀತಿ ಆಡಳಿತ ಮಂಡಳಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಕಟಣೆ ಬಂದಲ್ಲಿ ಅದಕ್ಕೆ ಭಕ್ತರು ಪ್ರತಿಕ್ರಿಯಿಸಬಾರದು ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ. ಕೊರಗಜ್ಜ ದೈವಕ್ಕೆ ಚಕ್ಕುಲಿ, ಎಲೆ-ಅಡಿಕೆ, ಮದ್ಯವೆ ನೈವೇದ್ಯ. ಇದನ್ನು ಹೊರತುಪಡಿಸಿ ಯಾವುದೇ ವೈಭವದ, ಆಡಂಬರದ ಸೇವೆಯನ್ನು ಕೊರಗಜ್ಜ ಬಯಸುವುದಿಲ್ಲ. ಕೊರಗಜ್ಜನ ಭಕ್ತರು ಕೇವಲ ಕರಾವಳಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯದಲ್ಲೂ ಇದ್ದು ಇದನ್ನೆ ಬಂಡವಾಳ ಮಾಡಿಕೊಂಡಿರುವ ದುರುಳರು ವಂಚನೆಗೆ ಇಳಿದಿದ್ದು, ಇವರಿಗೆ ಸ್ವಾಮಿ ಕೊರಗಜ್ಜನೇ ಸದ್ಬುದ್ದಿ ನೀಡಬೇಕಾಗಿದೆ.

RELATED ARTICLES
- Advertisment -
Google search engine

Most Popular