ಕಲಬುರಗಿ: ಎಂದಿನಂತೆ ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ. ರಾತ್ರಿ ಹತ್ತು ಗಂಟೆಗೆ ಆತನ ತಂದೆ ಕರೆ ಮಾಡಿ ಎಲ್ಲಿದ್ದಿಯಾ, ಎಷ್ಟೋತ್ತಿಗೆ ಮನೆಗೆ ಬರ್ತಿಯಾ ಅಂತಾ ವಿಚಾರಿಸಿದ್ದಾರೆ. ಸ್ನೇಹಿತರ ಜೊತೆ ಹೊರಗಡೆ ಇದ್ದೇನೆ. ಆದಷ್ಟು ಬೇಗ ಬರ್ತೆನೆ ಅಂತಾ ಹೇಳಿದ್ದಾ.
ಆದರೆ ತಡರಾತ್ರಿಯಾದರೂ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ಮಗನ ಬರುವಿಕೆಯ ದಾರಿ ಕಾಯ್ತಿದ್ದ ಹೆತ್ತವರು ಬಳಿಕ ನಿದ್ದೆಗೆ ಜಾರಿದ್ದಾರೆ. ಬೆಳಗಾಗುವಷ್ಟರಲ್ಲಿ ಮನೆಯಿಂದ ಐವತ್ತು ಅಡಿ ದೂರದಲ್ಲೆ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿ ಬಿಸಾಕಿರುವ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನ ಸ್ಮೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿಬಿದ್ದಾರೆ.
ಜೊತೆಗಿದ್ದ ಸ್ನೇಹಿತರೇ ತಮ್ಮ ಕುಚಿಕು ಗೆಳೆಯನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಒಂದಲ್ಲ, ಎರಡಲ್ಲ ಅಂತಾ ಬರೊಬ್ಬರಿ 12 ಬಾರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೊಂದೆಡೆ ಮಗನನ್ನ ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕಿದ್ದಾರೆ. ಸಂಜೆಯವರೆಗೂ ಜೊತೆಗಿದ್ದ ಸ್ನೇಹಿತ ಇನ್ನಿಲ್ಲ ಅಂತಾ ಮೌನಕ್ಕೆ ಶರಣಾಗಿರುವ ಸ್ನೇಹಿತರು. ಅಂದಹಾಗೆ ಇಂತಹದೊಂದು ಘಟನೆಗೆ ಕಲಬುರಗಿ ನಗರ ಸಾಕ್ಷಿಯಾಗಿದೆ. ನಗರದ ರಾಜಾಪುರ ಬಡಾವಣೆಯ ನಿವಾಸಿಯಾದ ರೇವಣಸಿದ್ದ ಅನ್ನೋ ಯುವಕನನ್ನು ನಿನ್ನೆ ತಡರಾತ್ರಿ ಆತನ ಸ್ನೇಹಿತರೆ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ನಿನ್ನೆ ತಡರಾತ್ರಿ ರೇವಣಸಿದ್ದ ಆತನ ಸ್ನೇಹಿತರೊಂದಿಗೆ ಮನೆಯಿಂದ ಆಚೆ ಹೋಗಿ ವಾಪಸ್ ಬಂದಿದ್ದಾರೆ. ವಾಪಸ್ ಮನೆ ಬಳಿ ಬರ್ತಿದ್ದ ಹಾಗೆಯೇ ಮನೆಯಿಂದ 50 ಅಡಿ ದೂರದಲ್ಲೇ ಕೊಲೆ ಮಾಡಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.
ಘಟನೆ ವಿವರ
ಇನ್ನೂ ಕೊಲೆಯಾದ ರೇವಣಸಿದ್ದ ಫೈನಾನ್ಸ್ ನಡೆಸುತ್ತಿದ್ದ. ಸಂಜೆ ಆರು ಗಂಟೆ ಸುಮಾರಿಗೆ ಎಂದಿನಂತೆ ಮನೆಯಿಂದ ಆಚೆ ಹೋಗಿದ್ದಾನೆ. ಪ್ರತಿನಿತ್ಯ ಹತ್ತು, ಹನ್ನೊಂದು ಗಂಟೆ ಸುಮಾರಿಗೆ ಮನೆಗೆ ವಾಪಸ್ ಬರ್ತಿದ್ದ. ಆದರೆ ನಿನ್ನೆ ರಾತ್ರಿ ಹನ್ನೆರೆಡು ಗಂಟೆ ಕಳೆದ್ರು ಕೂಡ ವಾಪಸ್ ಬಂದಿರಲಿಲ್ಲ. ಹಾಗಾಗಿ ರಾತ್ರಿ ರೇವಣಸಿದ್ದ ತಂದೆ ರಾಮಪ್ಪ ಮಗನಿಗೆ ಕರೆ ಮಾಡಿ ಎಲ್ಲಿದ್ದಿಯಾ, ಯಾವಾಗ ಬರ್ತಿಯಾ ಅಂತಾ ವಿಚಾರಿಸಿದ್ದಾರೆ. ಬರ್ತೆನೆ ಇಲ್ಲೇ ಸ್ನೇಹಿತರ ಜೊತೆಗಿದ್ದೇನೆ ಅಂತಾ ಹೇಳಿ ಕಾಲ್ ಕಟ್ ಮಾಡಿದ್ದಾನೆ.
ಅದಾದ ಬಳಿಕ ಆತನ ಬೈಕ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಬಳಿ ಬಿಟ್ಟು ಉಳಿದ ಸ್ನೇಹಿತರ ಬೈಕ್ ಮೇಲೆ ಕರೆದುಕೊಂಡು ಬಂದಿದ್ದಾರೆ. ಮನೆ ಹತ್ರ ಬರ್ತಿದ್ದ ಹಾಗೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ವಾಕಿಂಗ್ ಬಂದವರು ಕೊಲೆಯಾದ ದೃಶ್ಯವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ರೇವಣಸಿದ್ದ ಕುಟುಂಬಸ್ಥರಿಗೆ ಕೊಲೆಯಾದ ವಿಚಾರ ಮುಟ್ಟಿಸಿದ್ದಾರೆ.
ಮಗನ ದಾರಿ ಕಾಯುತ್ತ ಕೂತಿದ್ದ ಕುಟುಂಬಸ್ಥರಿಗೆ ಆತನ ಕೊಲೆಯಾದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ. ಇನ್ನೂ ಕಲಬುರಗಿಯಲ್ಲಿ ಕ್ರೈಂ ಹೆಚ್ಚಾಗ್ತಿರೋದಕ್ಕೆ ರೇವಣಸಿದ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಕೊಲೆಯ ಹಿಂದಿನ ಅಸಲಿ ಕಾರಣ ಹೊರಬರಬೇಕಾಗಿದೆ.