ಮೂಡುಬಿದಿರೆ: ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾದ ಅಮಾನುಷ ಘಟನೆ ಮೂಡುಬಿದಿರೆ ಹೊರವಲಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಬಾಲಕಿಯ ಆರೋಪಿ ತಂದೆಯನ್ನು ಮೂಡುಬಿದಿರೆ ಪೊಲೀಸರು ಫೊಕ್ಸೊ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಐವತ್ತೈದರ ಹರೆಯದ ಬಂಧಿತ ಆರೋಪಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ಆರು ತಿಂಗಳ ಹಿಂದೆ ಮನೆಯಲ್ಲೆ ತನ್ನ ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಪ್ರೌಢ ಶಾಲೆಯಲ್ಲಿ ಓದುತ್ತಿರುವ ಆಕೆಯ ಆರೋಗ್ಯದಲ್ಲಿ ಏರು ಪೇರು ಉಂಟಾದಾಗ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಆತನೇ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಮಗಳು ಆರು ತಿಂಗಳ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ.
ಪೊಲೀಸ್ ತನಿಖೆಯ ದಾರಿ ತಪ್ಪಿಸಲು ಪ್ರಾರಂಭದಲ್ಲಿ ಈತ ಬೇರೆಯವರ ಹೆಸರು ಹೇಳಿದ್ದ ಎನ್ನಲಾಗಿದೆ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿದ್ದನ್ನು ಕೊನೆಗೂ ಒಪ್ಪಿಕೊಂಡನೆನ್ನಲಾಗಿದೆ. ಮಂಗಳೂರು ಮಹಿಳಾ ಪೊಲೀಸ್‍ಠಾಣೆಯಲ್ಲಿ ಆರೋಪಿ ವಿರುದ್ಧ ಫೊಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಗುರುವಾರ ಮೂಡುಬಿದಿರೆ ಪೊಲೀಸ್ ಇನ್‍ಸ್ಪೆಕ್ಟರ್ ಸಂದೇಶ್ ಕುಮಾರ್ ಬಂಧಿಸಿದ್ದಾರೆ.