Thursday, December 5, 2024
HomeUncategorizedಪುತ್ತೂರು ಎಸ್ ಸಿ ಐ ಯಿಂದ ಸಾರ್ಥಕವಾದ ದೀಪಾವಳಿ ಆಚರಣೆ 

ಪುತ್ತೂರು ಎಸ್ ಸಿ ಐ ಯಿಂದ ಸಾರ್ಥಕವಾದ ದೀಪಾವಳಿ ಆಚರಣೆ 

ಆಚರಿಸುವೆವು ಹಬ್ಬ ಮನದ ಸಂತೋಷಕ್ಕೆ. ಆದರೆ ಇನ್ನೊಬ್ಬರ ಮುಖದಲ್ಲಿ ಆ ಸಂತೋಷವನ್ನು ಕಂಡು ಅವರೊಟ್ಟಿಗೆ ದೀಪಾವಳಿ ಆಚರಿಸುವುದು ಇದೆಯಲ್ಲ, ಅದಕ್ಕೆ ಮನಸುಗಳು ಒಂದಾಗಬೇಕು, ಹೃದಯ ವೈಶಾಲ್ಯತೆ ಇರಬೇಕು. ಸಮಯವಿಲ್ಲವೆಂದು ಹೇಳುವ ಮಾತು ಪಕ್ಕಕ್ಕಿಡಬೇಕು. ಈ ಘಳಿಗೆಗೆ ಅವರ್ಯಾರೋ ನಾವ್ಯಾರೋ, ಆದರೆ ಅಂತರಂಗದ ಮನಸ್ಸು ಅಲ್ಲಿ ಸೇರಿ ಮುಗ್ಧ ಮನಗಳಿಗೆ ಸಂತೋಷ ನೀಡುತ್ತಾ ದೀಪಾವಳಿ ಆಚರಿಸುವುದು ಇದೆಯಲ್ಲ ಅದು ಎಲ್ಲರಿಗೂ ದೊರಕದು ಹಾಗೂ ಆಚರಿಸಲಾಗದು. ಸ್ನೇಹಿತರಿಗಿಂತಲೂ ಹಾಗೂ ಸಂಬಂಧಿಕರಿಗಿಂತಲೂ ಹೆಚ್ಚೆನ್ನಬಹುದು ಆ ಭ್ರಾತೃತ್ವ ಪ್ರೀತಿ. ಆ ಕಣ್ಣಿನ ಖುಷಿ, ಅವರ ಮುಖದ ಭಾವನೆಗಳು ನಿಷ್ಕಲ್ಮಶ ಭಾವ ಓಹ್…. ವರ್ಣಿಸಲು ಪದಗಳು ಬರುತ್ತಿಲ್ಲವಲ್ಲ… *ಪುತ್ತೂರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತಂಡವು ಬೀರಮಲೆ ಪ್ರಜ್ಞಾ ಆಶ್ರಮದಲ್ಲಿ* ಬೆಳಕಿನ ಹಬ್ಬವನ್ನು ಆ ಮುಗ್ಧ ಮನಗಳಲ್ಲಿ ಬೆಳಕಾಗಿಸಿದ ಪರಿಗೆ ಆ ದೇವರಿಗೆ ಶರಣೆನ್ನಬೇಕು. ಅಮೃತಗಳಿಗೆಯೇ ಅದು. ಅವರು ನಗುತ್ತಾ ಹಾಡಿದ ಆ ಭಜನೆಯ ಹಾಡುಗಳು, ಕೈಗಳನ್ನು ತಟ್ಟುತ್ತಾ ಆ ಚಪ್ಪಾಳೆ ಹಾಕುವ ರೀತಿ, ತಾಳ ತಟ್ಟುವ ರೀತಿ, ಆ ಮುಗ್ಧತೆ, ಮನದೊಳಗೆ ಇಳಿದು ಹೃದಯಕ್ಕೆ ತಟ್ಟಿದರೆ ಮಾತ್ರ ಅದನ್ನು ಅನುಭವಿಸೋಕೆ ಸಾಧ್ಯ. ನಕ್ಷತ್ರ ಕಡ್ಡಿಯ ಬೆಳಕಿನಲ್ಲಿ ಅವರ ಕಣ್ಣುಗಳ ಹೊಳಪು, ಇತರ ಸಣ್ಣ ಪಟಾಕಿಗಳಿಗೆ ಬೆಂಕಿ ಹಚ್ಚಿ ಖುಷಿಪಡುವ ಆ ಮುಗ್ಧ ಮನಸ್ಸುಗಳು, ನೆಲಚಕ್ರಗಳ ತಿರುಗುವಿಕೆಯಲ್ಲಿ ತಾವೂ ಖುಷಿಯಾಗಿ ತಿರುಗಾಡುವ ಆ ಬಗೆಯನ್ನು ಕಂಡಾಗ ಎಲ್ಲರೂ ಸಂಭ್ರಮ ಪಡಲೇಬೇಕು. ದೀಪಾವಳಿ ಸಂಭ್ರಮವನ್ನು ಹೀಗೂ ಆಚರಿಸಲು ಸಾಧ್ಯ ಎಂಬುದನ್ನು ನಮ್ಮ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತಂಡ ಪುತ್ತೂರು ದೃಢಪಡಿಸಿತು. ಹಾಗಾಗಿ ಇದಕ್ಕೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ವಂದನೆಗಳನ್ನು ಸಲ್ಲಿಸಲೇಬೇಕು. ಸಿಹಿಯನ್ನಿತ್ತು ಫಲಗಳನ್ನು ತಿಂದು ಹೊರಡುವಾಗಲಂತೂ ಹೆಜ್ಜೆಗಳು ಭಾರವಾಗಿತ್ತು. ಎಲ್ಲರಿಗೂ ಟಾಟಾ ಹೇಳುತ್ತಾ ಕೈ ಬೀಸುವ ಬಗೆ ಅಲ್ಲೊಂದು ಪ್ರಪಂಚವೇ ಸೃಷ್ಟಿಯಾಗಿತ್ತು ಎನ್ನಬಹುದು. ಅವರೆಲ್ಲರನ್ನೂ ನೋಡಿಕೊಳ್ಳುವ ಒಂದು ಪುಟ್ಟ ಸಂಸಾರವಿದೆ. ಅವರೆಲ್ಲರಿಗೂ ಒಂದು ದೊಡ್ಡ ನಮಸ್ಕಾರ ಹೇಳಲೇಬೇಕು.

-ಮಲ್ಲಿಕಾ ಜೆ ರೈ ಪುತ್ತೂರು

RELATED ARTICLES
- Advertisment -
Google search engine

Most Popular