ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಸಾಹಸಿ ಶ್ರೀ ಶಿವರಾಮ ಕಾಸರಗೋಡು
ಎರಡೂ ಕನ್ನಡ ಪ್ರದೇಶಗಳು ವಿವಾದದಿಂದ ಕೂಡಿದ್ದು. ಅತ್ತ ದಕ್ಷಿಣ ತುದಿಗೆ ಕಾಸರಗೋಡು.. ಇತ್ತ ಉತ್ತರದಲ್ಲಿ ಬೆಳಗಾವಿ. ಸುಮಾರು ೫೦೦-೫೫೦ ಕಿ.ಮೀ. ಅಂತರ. ಕರ್ನಾಟಕಕ್ಕೆ ಸೇರಬೇಕಾದ ಕಾಸರಗೊಡು ಕೇರಳದ ಪಾಲಾಯಿತು. ಅದೃಷ್ಟವಶಾತ್ ಬೆಳಗಾವಿ ಮಹಾರಾಷ್ಟ್ರದ ಪಾಲಾಗದೇ ಉಳಿದುಕೊಂಡಿದೆ. ಆಗುವುದೂ ಇಲ್ಲ. ಆಳುವ ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇದ್ದಿದ್ದರೆ ಕಾಸರಗೋಡನ್ನು ಉಳಿಸಿಕೊಳ್ಳಬಹುದಿತ್ತು.
೧೯೮೨ ರಲ್ಲಿ ನಾನು ಒಂದು ಸಾಹಿತ್ಯ ಯಾತ್ರೆ ರೂಪಿಸಿ ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರನ್ನು ನಾಲ್ಕು ಜಿಲ್ಲೆಗಳಿಗೆ ಕರೆದೊಯ್ದಾಗ ಕಾಸರಗೋಡಿನಲ್ಲೂ ಕಾರ್ಯಕ್ರಮ ಆಗಿತ್ತು. ಸಂಗಡ ಮಂಜೇಶ್ವರ/ ಪೆರಡಾಲಗಳಲ್ಲೂ. ಅಂದು ಹಿರಿಯರಾದ ಕಯ್ಯಾರರು ಮತ್ತು ಇತರ ಕೆಲ ಹಿರಿಯರು ಕಾಸರಗೋಡು ಕರ್ನಾಟಕಕ್ಕೆ ಸೇರದೇ ಇರುವ ಬಗ್ಗೆ ಕಣ್ಣೀರು ಹಾಕಿದ್ದರು. ಅವರ ಆಸೆ ಕೊನೆಗೂ ಈಡೇರಲೇ ಇಲ್ಲ.
ಮೊನ್ನೆ ದಿ. ೨೭ ರಂದು ಕಾಸರಗೋಡಿಗೆ ಹೋದಾಗ ಹಿಂದಿನ ಸಂಗತಿಗಳು ನೆನಪಾದವು. ಈಗ ಆ ಹಿರಿಯರು ಯಾರೂ ಇಲ್ಲ. ಆದರೆ ಅವರ ನಿಟ್ಟುಸಿರುಗಳು ಮಾತ್ರ ಕಿವಿಗೆ ಅಪ್ಪಳಿಸುತ್ತಲೇ ಇವೆ. ಒಂದು ಸಮಾಧಾನದ ಸಂಗತಿ ಎಂದರೆ ಕಾಸರಗೋಡು ಕೇರಳಕ್ಕೆ ಸೇರಿದರೂ ಅಲ್ಲಿ ಕನ್ನಡದ ದನಿಯೇನೂ ಮರೆಯಾಗಿಲ್ಲ. ಸಾಕಷ್ಟು ಕನ್ನಡಿಗರಿದ್ದಾರೆ. ಸಾಕಷ್ಟು ಕನ್ನಡ ಚಟುವಟಿಕೆಗಳು ನಡೆಯುತ್ತಿವೆ. ಕನ್ನಡದ ಕೆಲಸ ಮಾಡುವವರು ಸಹ ಬಹಳ ಜನರಿದ್ದಾರೆ. ಮಲೆಯಾಳಿ, ಇಂಗ್ಲೀಷು ಮತ್ತು ಕನ್ನಡ ಮೂರೂ ಭಾಷೆಗಳು ಕೇಳಿಬರುತ್ತವೆ. ಫಲಕಗಳಲ್ಲೂ ಕಾಣಸಿಗುತ್ತವೆ. ದಿ. ೨೭ ರ ಸಮ್ಮೇಳನದಲ್ಲಿ ಆಯೇಷಾ ಎಂಬ ಮುಸ್ಲಿಂ ಹೆಣ್ಣುಮಗಳು ಬಹಳ ಸುಂದರವಾಗಿ ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದರು. ಅಂಥವರು ಬಹಳ ಇದ್ದಾರೆ.
ಕನ್ನಡ ಗ್ರಾಮ
ಗಮನ ಸೆಳೆಯುವ ಸಂಗತಿಯೆಂದರೆ ಇಲ್ಲೊಂದು ” ಕನ್ನಡ ಗ್ರಾಮ” ವೇ ಇದೆ. ಈಗ ಈ ಕನ್ನಡ ಗ್ರಾಮಕ್ಕೆ ೩೫ ವರ್ಷ. ( ದಕ್ಷಿಣ ಕನ್ನಡ / ಉಡುಪಿ ಜಿಲ್ಲೆಯಲ್ಲೊಂದು ” ಕನ್ನಡ ದ್ವೀಪ” ಹಾಗೂ ಮಹಾರಾಷ್ಟ್ರದಲ್ಲಿ ಒಂದು ಕನ್ನಡ ಎಂಬ ಹೆಸರಿನ ಪ್ರದೇಶ ಇರುವುದು ನೆನಪಿಗೆ ಬಂತು). ಕನ್ನಡ ಗ್ರಾಮದಲ್ಲಿ ೧೯೯೦ ನವೆಂಬರ್ ದಲ್ಲಿ ” ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಎಂಬ ಸಂಘಟನೆಯನ್ನು ರೂಪಿಸಿದ್ದು ಶ್ರೀ ಶಿವರಾಮ ಕಾಸರಗೋಡು ಅವರು. ನಿರಂತರ ಅವರು ಕಾಸರಗೋಡಿನ ಪರಿಸರವನ್ನು ಕಾದುಕೊಂಡು ಬರಲು ಶ್ರಮಿಸಿದವರು. ಬಗೆಬಗೆಯ ಸಭೆ ಸಮ್ಮೇಳನ , ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತ ಬಂದವರು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿಗೂ ಅವರು ೨೫ ವರ್ಷಗಳಿಂದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ೧೮ ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ, ಕೇರಳ ರಾಜ್ಯ ೮ ನೇ ಕನ್ನಡ ಸಮ್ಮೇಳನ, ಕೇರಳ -ಕರ್ನಾಟಕ ಉತ್ಸವ, ಕನ್ನಡ ಜಾಗೃತಿ ಸಮ್ಮೇಳನ, ಕೆರಳ ರಾಜ್ಯ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನ, ಕನ್ನಡ ನಾಟಕೋತ್ಸವ, ರಾಜ್ಯ ದಾಸ ಸಾಹಿತ್ಯ ಸಮ್ಮೇಳನ, ಯಕ್ಷಗಾನ ಉತ್ಸವ, ಪತ್ರಿಕಾ ದಿನಾಚರಣೆ..ಒಂದಲ್ಲ ಎರಡಲ್ಲ, ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತ ಬಂದ ಶಿವರಾಮ ಕಾಸರಗೋಡು ಅವರು ಓರ್ವ ಅಪ್ಪಟ ಕನ್ನಡ ಮನುಷ್ಯ ಮಾತ್ರವಲ್ಲ, ಕ್ರಿಯಾಶೀಲ ವ್ಯಕ್ತಿ. ಅವರು ಖಾಲಿ ಕುಳಿತಿದ್ದನ್ನು ಯಾರೂ ನೋಡಿಲ್ಲ. ವಿಶೇಷವೆಂದರೆ ಕೇರಳ ಸರಕಾರವೂ ಅವರಿಗೆ ಕೆಲವು ವಿಷಯಗಳಲ್ಲಿ ಸಹಕಾರ ನೀಡುತ್ತ ಬಂದಿದೆ. ೨೫ ಲಕ್ಷ ರೂ. ವೆಚ್ಚದಲ್ಲಿ ೨೦೦ ಆಸನದ ವ್ಯವಸ್ಥೆ ಉಳ್ಳ ” ಸಾಂಸ್ಕೃತಿಕ ಭವನ” / ಬಯಲು ಮಂಟಪ” ನಿರ್ಮಿಸಿದ್ದೊಂದು ಮೈಲುಗಲ್ಲು. ತಮ್ಮ ವೈಯಕ್ತಿಕ ಪ್ರಯೋಜನಕ್ಕಷ್ಟೇ ಗಮನ ಕೊಡದೆ ಮೊನ್ನೆ ಕನ್ನಡ ಗ್ರಾಮಕ್ಕಾಗಿ ೩೦೦ ಮೀಟರುಗಳಷ್ಟು ಉದ್ದದ ಶಾಶ್ವತ ಕಾಂಕ್ರೀಟ್ ರಸ್ತೆಯನ್ನು ಕಾಸರಗೋಡು ನಗರ ಸಭೆ ಮತ್ತು ಮಧೂರು ಗ್ರಾಮ ಪಂಚಾಯತ ನೆರವಿನೊಡನೆ ಒಟ್ಟು ೩೦ ಲಕ್ಷ ರೂ. ವೆಚ್ಚದಲ್ಲಿ ಮಾಡಿಸಿಕೊಟ್ಟಿದ್ದಾರೆ. ಅವರ ಸಾಮಾಜಿಕ ಸೇವಾ ಕಾಳಜಿಗಿದು ನಿದರ್ಶನ. ಇಂತಹ ಸಾಕಷ್ಟು ಸೇವಾ ಕಾರ್ಯಗಳು ಅವರಿಂದ ನಡೆದಿವೆ.
ಇಂತಹ ಒಬ್ಬ ಸಾಹಸಿಯ ನೇತೃತ್ವದಲ್ಲಿ ಈಚೆಗೆ ನಡೆದ ಜಿಲ್ಲಾ ಚುಸಾಪ ಬೆಳ್ಳಿ ಹಬ್ಬ ಮತ್ತು ಏಳನೆಯ ಜಿಲ್ಲಾ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶ ನನಗೆ ಒದಗಿಬಂತು. ಬೆಳಗಾವಿಯಲ್ಲಿ ಮಾರ್ಚ ೧/೨ ರಂದು ನಾವು ಸಂಘಟಿಸಿದ ಜಿಲ್ಲಾ ಚುಸಾಪ ಬೆಳ್ಳಿಹಬ್ಬ ಮತ್ತು ನಾಲ್ಕನೆಯ ಸಮ್ಮೇಳನಕ್ಕೆ ಬಂದು ಭಾಗವಹಿಸಿದ್ದ ಶಿವರಾಮ ಅವರು ನಮ್ಮನ್ನೂ ಕಾಸರಗೋಡಿಗೆ ಬನ್ನಿ ಎಂದು ಆಮಂತ್ರಿಸಿದ್ದರು. ನಾವು ಕೆಲವು ಜಿಲ್ಲಾ ಪದಾಧಿಕಾರಿಗಳು ಅಲ್ಲಿಗೆ ಹೋಗಿ ಭಾಗವಹಿಸಿದ್ದು ಅವರಿಗೂ ಬಹಳ ಖುಷಿ ಕೊಟ್ಟಿತು. ಬೆಳಗಾವಿ ಜಿಲ್ಲೆಗೆ ಅವರು ವಿಶೇಷ ಗೌರವವನ್ನೂ ನೀಡಿದರು. ಇದೊಂದು ಸಾಹಿತ್ಯ ಕ್ಷೇತ್ರದಲ್ಲಿ ಪರಸ್ಪರ ಬಾಂಧವ್ಯ ಬೆಳೆಸುವಂತಹ ಮಹತ್ವದ ಬೆಳವಣಿಗೆಯೆನಿಸಿತು. ಈ ಬಾಂಧವ್ಯ ಮುಂದುವರಿಯುವಂತೆ ನೋಡಿಕೊಳ್ಳಬೇಕಾಗಿದೆ.
– ಎಲ್. ಎಸ್. ಶಾಸ್ತ್ರಿ