ಹಾಸನ: ಮುಂದಿನ ವಾರದಲ್ಲಿ ಹಸೆಮಣೆ ಏರಬೇಕಿದ್ದ ಪೊಲೀಸ್ ಪೇದೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ತಾಲೂಕಿನ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್‌ಸ್ಟೇಬಲ್, ಬಾಗೇಶಪುರ ಗ್ರಾಮದ ಹರೀಶ್.ವಿ (32) ಹತ್ಯೆಯಾದವರಾಗಿದ್ದಾರೆ.
ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತ ಪೊಲೀಸ್ ಪೇದೆ ಹರೀಶ್ ಇತ್ತೀಚೆಗಷ್ಟೇ ಹೊಸದಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಸಮಾರಂಭವನ್ನು ನಡೆಸಿದ್ದರು. ನವೆಂಬರ್ 11 ರಂದು ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ರಜೆಯ ಮೇಲೆ ನವೆಂಬರ್ 3 ರಂದು ಗ್ರಾಮಕ್ಕೆ ಬಂದಿದ್ದರು. ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರಿಗೆ ನೀಡಿ ರಾತ್ರಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮುಖಕ್ಕೆ ಬಟ್ಚೆ ಕಟ್ಟಿಕೊಂಡು ಬಂದಿರುವ ದುಷ್ಕರ್ಮಿಗಳು ರಸ್ತೆ ಅಡ್ಡಗಟ್ಟಿಸ ಹರೀಶ್ ಅವರ ಮುಖದ ಮೇಲೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಗಂಭೀರವಾದ ಗಾಯಗೊಂಡಿದ್ದ ಹರೀಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಹರೀಶ್ ಹಾಸನದಲ್ಲಿ ಒಂಟಿಯಾಗಿ ವಾಸವಿದ್ದ ಮಾಜಿ ಯೋಧನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದ್ದು. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರೀಶ್ ಹತ್ಯೆ ಹಿಂದೆ ಮಾಜಿ ಯೋಧ ಮತ್ತು ಇತರೆ ಇಬ್ಬರ ಪಾತ್ರವಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೀಗ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಅವರು ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಶ್ವಾನ ದಳದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವಿಶೇಷ ತಂಡದಿಂದ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ ಯಾರನ್ನು ಬಂಧನಕ್ಕೊಳಪಡಿಸಿಲ್ಲ.