spot_img
29.6 C
Udupi
Wednesday, June 7, 2023
spot_img
spot_img
spot_img

ಕದ್ರಿಯ ಒಂದು ಶಾಸನದ ಮರು ಓದು

ಮಂಗಳೂರು: ಕದ್ರಿ ದೇವಾಲಯದ ಹೆಡ್ ಕ್ಲರ್ಕ್ ಶ್ರೀ ಅರುಣ್ ಕುಮಾರ್ ಅವರ ಮಾಹಿತಿಯ ಮೇರೆಗೆ ಕದ್ರಿ ಶ್ರೀ ಜೋಗಿಮಠದ ಮತ್ಸ್ಯೇಂದ್ರನಾಥ ಗುಡಿಯ ಆವರಣದಲ್ಲಿರುವ ವಿಜಯನಗರ ದೊರೆ ವಿಜಯ ಭೂಪತಿರಾಯನ ಶಾಸನವನ್ನು ಪ್ಲೀಚ್ ಇಂಡಿಯಾ ಫೌಂಡೇಶನ್-ಹೈದರಾಬಾದ್ ಇಲ್ಲಿನ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮರು ಓದಿಗೆ ಒಳಪಡಿಸಿರುತ್ತಾರೆ. ಶಾಸನವು ಒಟ್ಟು 31 ಸಾಲುಗಳನ್ನು ಒಳಗೊಂಡಿದ್ದು, ಪ್ರಾರಂಭಿಕ ಅಧ್ಯಯನದ ಸಂದರ್ಭದಲ್ಲಿ ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದರಿಂದ ಪ್ರಾರಂಭಿಕ 10 ಸಾಲುಗಳನ್ನು ಮಾತ್ರ ‘ದಕ್ಷಿಣ ಭಾರತ ಶಾಸನ ಸಂಪುಟ-7, ಶಾಸನ ಸಂ- 192’ರಲ್ಲಿ ಪ್ರಕಟ ಮಾಡಲಾಗಿದೆ. ಇತ್ತೀಚೆಗೆ ಗುಡಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಣ್ಣಿನಲ್ಲಿ ಹುದುಗಿ ಹೋಗಿದ್ದ ಈ ಶಾಸನವನ್ನು ಮೇಲೆತ್ತಿದ್ದು ಪ್ರಸ್ತುತ ಈ ಶಾಸನದ ಸಮಗ್ರ ಅಧ್ಯಯನವನ್ನು ಮಾಡಿ, ಹೆಚ್ಚಿನ ವಿವರವನ್ನು ದಾಖಲು ಮಾಡಲಾಗಿದೆ.
‘ಸ್ವಸ್ತಿಶ್ರೀ’ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ದಾನಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಹಾಗೂ ಇದರ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ನಂದಿ ಮತು ದೀಪಕಂಬದ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ವಿಜಯ ಭೂಪತಿರಾಯನ ಕಾಲಾವಧಿಯಲ್ಲಿ ಮನ್ಮಹಾ ಪ್ರಧಾನ ಬೈಚೆ ದಂಡನಾಯಕನ ನಿರೂಪದಿಂದ, ಮಂಗಳೂರು ರಾಜ್ಯವನ್ನು ಪಾಲಿಸುತ್ತಿದ್ದ ನಾಗಂಣನು, ದೊರೆ ವಿಜಯ ಭೂಪತಿರಾಯನ ಆಯುಷ್ಯಾಭಿವೃದ್ಧಿಗಾಗಿ ಶಕವರುಷ 1345ನೆಯ ಶೋಭಕೃತ ಸಂವತ್ಸರದ ಚೈತ್ರ ಶುದ್ಧ 1 ಆದಿತ್ಯವಾರ (ಸಾ.ಶ. 21/02/1423) ದಂದು ಶ್ರೀ ತಿಮಿರೇಶ್ವರ ದೇವರಲ್ಲಿ ಶಾಲಂಕಾಯನ ಗೋತ್ರದ ರುಕ್ ಶಾಖೆಯ ನರಹರಿ ಭಟ್ಟರ ಪುತ್ರ ಕೃಷ್ಣ ಭಟ್ಟರು ಮತ್ತು ಆತ್ರೇಯ ಗೋತ್ರದ ಯರ್ಜು ಶಾಖೆಯ ಅನಂತ ಭಟ್ಟರ ಪುತ್ರ ಮಾಯಿ ಭಟ್ಟರಿಂದ ದುರ್ಗಾದೇವಿಯ ಜಪವ ಮಾಡಿಸುತ್ತಾನೆ. ಈ ಸಂದರ್ಭದಲ್ಲಿ ಆ ಇಬ್ಬರು ಬ್ರಾಹ್ಮಣರಿಗೆ 120 ಮೂಡೆ ಭತ್ತ ಬೆಳೆಯುವ ಭೂಮಿಯನ್ನು ದಾನವಾಗಿ ನೀಡಿದ್ದು, ಆ ಭೂಮಿಯ ಚತುಸ್ಸೀಮೆಯ ವಿವರವನ್ನು ಶಾಸನವು ತಿಳಿಸುತ್ತದೆ. ಹಾಗೆಯೇ ಶಾಸನದಲ್ಲಿ ಮಂಜುನಾಥ ದೇವರು, ಅರಸುತನದ ಶ್ರೀ ಚಕ್ರಪಾಣಿ ಗೋಪಿನಾಥ ದೇವರ ಉಲ್ಲೇಖಗಳಿದ್ದು, ಶಾಸನವು ಶಾಪಾಶಯ ವಾಕ್ಯದೊಂದಿಗೆ ಮುಕ್ತಾಯಗೊಂಡಿದೆ.
ಈ ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಮಾರ್ಗದರ್ಶನ ನೀಡಿದ್ದು, ಅನುಷ ಆಚಾರ್ಯ ಮತ್ತು ಶ್ರೀ ಜೋಗಿಮಠದ ಅರಸರು ಸಹಕಾರ ನೀಡಿರುತ್ತಾರೆ.

Related Articles

Stay Connected

0FansLike
3,804FollowersFollow
0SubscribersSubscribe
- Advertisement -

Latest Articles