Thursday, April 24, 2025
Homeಕಾರ್ಕಳಕಳಸ-ಕಾರ್ಕಳ ಇಮ್ಮಡಿ ಭೈರರಸನ ಶಾಸನದ ಮರು ಅಧ್ಯಯನ

ಕಳಸ-ಕಾರ್ಕಳ ಇಮ್ಮಡಿ ಭೈರರಸನ ಶಾಸನದ ಮರು ಅಧ್ಯಯನ

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದಲ್ಲಿನ ಕುಸುಮ ಶೆಟ್ಟಿಯವರ ಗದ್ದೆಯ ಬದುವಿನಲ್ಲಿರುವ ಈ ಶಾಸನವನ್ನು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿರುವ ಈ ಶಾಸನವು 16 ನೆಯ ಶತಮಾನದ ಕನ್ನಡ ಲಿಪಿ‌ ಮತ್ತು ಭಾಷೆಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.

ಶಾಸನದ ಅಧ್ಯಯನವನ್ನು ಈ ಮೊದಲು ಮಾಡಿದ್ದರೂ ಸಹ ಕಾಲಮಾನದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಈ ಶಾಸನದ ಮರು ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯರವರ ಸಹಯೋಗದಲ್ಲಿ ಹಾಗೂ ಆದರ್ಶ್ ಶೆಟ್ಟಿ ಮತ್ತು ಅಕ್ಷಯ್ ಶೆಟ್ಟಿಯವರ ಮಾಹಿತಿಯ ಮೇರೆಗೆ ಮಾಡಿರುತ್ತಾರೆ.

ಜಿನ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನವು 1452 (ಸಾಮಾನ್ಯ ವರ್ಷ 1530) ರ ವಿಕೃತಿ ಸಂವತ್ಸರದ ಮಕರ ಮಾಸ ಶುದ್ಧ 15ನೆಯ ಆದಿವಾರಕ್ಕೆ ಸೇರುತ್ತದೆ (ಮೊದಲ ಅಧ್ಯಯನದಲ್ಲಿ ಶಕವರ್ಷ 1442 ವಿಕ್ರಮ ಸಂವತ್ಸರ ಎಂದು ಓದಿರುತ್ತಾರೆ). ಈ ಸಂದರ್ಭದಲ್ಲಿ ಕಳಸ-ಕಾರ್ಕಳ ಭೈರರಸ ರಾಣಿ ಬೊಮ್ಮಲ ದೇವಿಯ ಪುತ್ರ ಇಮ್ಮಡಿ ಭೈರರಸನು ರಾಜ್ಯಭಾರ ಮಾಡುತ್ತಿದ್ದಾಗ ಮುಡಾಳಿಯವರು ಕಾರ್ಕಳದಲ್ಲಿನ ಅಜಿತನಾಥ (ಜೈನ ತೀರ್ಥಂಕರ) ದೇವರ ಅಮೃತಪಡಿಗೆ ಬಿಟ್ಟ ಭೂಮಿಯಲ್ಲಿ ಉತ್ಪತ್ತಿಯು ಕಡಿಮೆಯಾದಾಗ ಅದಕ್ಕೆ ಪ್ರತಿಯಾಗಿ ಇಮ್ಮಡಿ ಭೈರರಸನು ಕೊಟ್ಟ ಭೂ ದಾನದ ವಿವರವನ್ನು ಶಾಸನವು ಉಲ್ಲೇಖಿಸುತ್ತದೆ.

ಕ್ಷೇತ್ರಕಾರ್ಯ ಶೋಧನೆಯಲ್ಲಿ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಶಶಾಂತ್, ಮಂಜುನಾಥ ನಂದಳಿಕೆ ಹಾಗೂ ಸ್ಥಳೀಯರಾದ ರತ್ನಾಕರ್ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ರಾಜೀವಿ ಶೆಟ್ಟಿಯವರು ಸಹಕಾರ ನೀಡಿರುತ್ತಾರೆ.

RELATED ARTICLES
- Advertisment -
Google search engine

Most Popular