ಬೆಂಗಳೂರು ; ಪರಿಶಿಷ್ಟ ಜಾತಿ ಅಲೆಮಾರಿ, ವಿಮುಕ್ತ ಬುಡಕಟ್ಟು ಗುಂಪುಗಳಿಗೆ ಓಳಮೀಸಲಾತಿಯಲ್ಲಿ ಕನಿಷ್ಟ ಶೇ 4 ರಷ್ಟು ಮೀಸಲಾತಿ ಕಲ್ಪಿಸುವಂತೆ ಮತ್ತು ವಿವಿಧ 12 ಬೇಡಿಕೆಗಳನ್ನು ಒಳಗೊಂಡ ಮತ್ತು ಪರಿಶೀಲನಾರ್ಹ ವೈಜ್ಞಾನಿಕ ದತ್ತಾಂಶಗಳನ್ನು ಕ್ರೋಡೀಕರಿಸಿ ಮೀಸಲಾತಿ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗಕ್ಕೆ ಕರ್ನಾಟಕ ಪ.ಜಾ ಮತ್ತು ಪ.ವ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಇಂದು ವಿಸ್ತೃತ ಮನವಿ ಸಲ್ಲಿಸಿದರು.
ನಗರದಲ್ಲಿಂದು ಜಸ್ಟೀಸ್ ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿ ಒಳ ಮೀಸಲಾತಿ ಕುರಿತು ವಿಸ್ತೃತ ಸಮಾಲೋಚನೆ ನಡೆಸಿತು.
ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಕುರಿತು ಪರಿಶೀಲನಾರ್ಹ ದಾಖಲೆಗಳು ಹಾಗೂ ದತ್ತಾಂಶಗಳನ್ನು ಸಂಗ್ರಹಿಸಿ, ಒಟ್ಟುಗೂಡಿಸಿ ಆಂತರಿಕ ಮೀಸಲಾತಿ ಅನುಷ್ಠಾನ ಕುರಿತು ನಡೆಸುತ್ತಿರುವ ಪರಿಶೀಲನೆಯಲ್ಲಿ ವಾಸ್ತಾವಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶೋಷಿತರಾಗಿಯೇ ಬದುಕುತ್ತಿರುವ ಅಲೆಮಾರಿಗಳು, ಸಾಮಾಜಿಕ ಕಳಂಕಕ್ಕೆ ಒಳಗಾಗಿರುವ ವಿಮುಕ್ತ ಬುಡಕಟ್ಟುಗಳು (ಡಿಎನ್‌ಟಿ) ಮತ್ತು ಸೂಕ್ಷ್ಮ ಸಮುದಾಯಗಳು ಮೀಸಲಾತಿ ರುಚಿಯನ್ನೇ ಸವಿಯದ ಜಾತಿಗಳಾಗಿವೆ. ಅಲ್ಪಸಂಖ್ಯಾತ, ಅಸಂಘಟಿತ, ಸಮುದಾಯಗಳಿಗೆ ಭೂಮಿ, ವಸತಿ, ಮೂಲಭೂತ ಸೌಕರ್ಯ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಒಳಮೀಸಲಾತಿ ಅತ್ಯುತ್ತಮ ಮಾರ್ಗವಾಗಿದೆ. ಇಂತಹ ಸಮುದಾಯಗಳಿಗೆ ಸಾಮಾಜಿಕ ನ್ಯಾಯದಡಿಯಲ್ಲಿ ಸಂವಿಧಾನಬದ್ದವಾಗಿ ಅವಕಾಶಗಳನ್ನು ಕಲ್ಪಿಸಲು ಇತ್ತೀಚಿನ ಸರ್ವೋಚ್ಚನ್ಯಾಯಾಲಯದ ಒಳವರ್ಗೀಕರಣದ ತೀರ್ಪು ಅತ್ಯಂತ ಮಹತ್ವಪೂರ್ಣದ್ದಾಗಿದೆ.
ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳಿಗೆ ಸರ್ಕಾರ ಗುರುತಿಸಿರುವ ಅಲೆಮಾರಿತನದ ಹಿನ್ನೆಲೆಯುಳ್ಳ ಪರಿಶಿಷ್ಟ ಜಾತಿಯ 51 ಸಮುದಾಯಗಳು ನೆಲೆ ಮತ್ತು ನೆಲದ ಒಡೆತನವಿಲ್ಲದೇ, ಒಂದೆಡೆ ನೆಲೆ ನಿಲ್ಲಲಾಗದ ಸ್ಥಿತಿಯಲ್ಲಿವೆ. 2011 ಜನಗಣತಿ ೧೪ ವರ್ಷಗಳ ಹಿಂದಿನದ್ದಾಗಿದ್ದು, ಇದೀಗ ಇರುವ ಅಂಕಿಅಂಶಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸರ್ವೋಚ್ಛನ್ಯಾಯಾಲಯದ ತೀರ್ಪಿನಂತೆ ಸಮುದಾಯಗಳ ಹಿಂದುಳಿದಿರುವಿಕೆಯನ್ನೇ ಮಾನದಂಡವನ್ನಾಗಿಸಿ ಪರಿಶಿಷ್ಟ ಜಾತಿಯಲ್ಲಿರುವ ಅವಕಾಶ ವಂಚಿತರಿಗೆ ಮೀಸಲಾಗಿಗಾಗಿ ಶಿಫಾರಸ್ಸು ಮಾಡಬೇಕು. ಒಳವರ್ಗೀಕರಣ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತಗೊಳಿಸದೇ ರಾಜಕೀಯ, ಸಹಕಾರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೂ ಒಳಮೀಸಲಾತಿಯನ್ನು ವಿಸ್ತರಿಸಿ ನೇಮಕಾತಿ, ಸೀಟು ಹಂಚಿಕೆ ಹಾಗೂ ಬಡ್ತಿಯಲ್ಲಿ ರೋಸ್ಟರ್ ವ್ಯವಸ್ಥೆಯನ್ನು ಅಳವಡಿಸಿ, ಬ್ಯಾಕ್‌ಲಾಗ್, ಹೊರ ಸಂಪನ್ಮೂಲ ನೇಮಕಾತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಾತಿಗಳಿಗೂ ಒಳಗೊಂಡಂತೆ ವರ್ಗಾಧಾರಿತ ಪುನರಾವರ್ತನೆ, ಆವರ್ತ ಬ್ಯಾಕ್‌ಲ್ಯಾಗ್ ನಿಯಮಗಳನ್ನು ಅನ್ವಯ ಆಗುವಂತೆ ನೀತಿ ರೂಪಿಸಲು ಶಿಫಾರಸ್ಸು ಮಾಡಬೇಕು ಎಂದು ಕೋರಿದೆ.
ನಿಯೋಗದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಮತ್ತು ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್. ಆನಂದ್ ಕುಮಾರ್ ಎಕಲವ್ಯ ಮತ್ತಿತರರು ಉಪಸ್ಥಿತರಿದ್ದರು.