ಯಕ್ಷಗಾನ ತಾಳಮದ್ದಲೆಯನ್ನು ಮಠದಲ್ಲಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದೇವೆ.
ಇಲ್ಲಿ ನಡೆಯುವ ತಾಳಮದ್ದಲೆಯಲ್ಲಿ ರಾಮಾಯಣ, ಮಹಾಭಾರತ, ಜೈನ ಪುರಾಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರು ಸಂಪದ್ಭರಿತ ಮನಸ್ಸು ಕಟ್ಟುವವರು ಎಂದು ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಜೈನಮಠದ ಭಟ್ಟಾರಕ ಭವನದಲ್ಲಿ ಸೋಮವಾರ ಸಾಯಂಕಾಲ ನಡೆದ ಆಧ್ಯ ಶ್ರೀ ಚಾರುಕೀರ್ತಿ ಯಕ್ಷಗಾನ ಕಲಾಬಳಗದ ೨೦೨೪ರ ಸರಣಿ ತಾಳಮದ್ದಲೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಾಳಮದ್ದಲೆಯ ಪ್ರಾಯೋಜಕ ಭುಜಬಲಿ ಧರ್ಮಸ್ಥಳ ಹಾಗೂ ಯಕ್ಷಗಾನ ಪೋಷಕ ಶೈಲೈಂದ್ರ ಕುಮಾರ್ ಅವರನ್ನು ಸ್ವಾಮೀಜಿ ಗೌರವಿಸಿದರು.
ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಮೂಡುಬಿದಿರೆ ಸರ್ವೀಸ್ ಕೋ-ಅಪೇರೇಟಿವ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಕಾರ್ಯಕ್ರಮದ ಸಂಯೋಜಕ ಶಾಂತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಕೃಷ್ಣಯ್ಯ ಮತ್ತಿತರರಿದ್ದರು. ಡಾ. ಪ್ರಭಾತ್ ಕುಮಾರ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು.
ಸರಣಿಯ ಮೊದಲ ತಾಳಮದ್ದಲೆ- ಭೀಷ್ಮಾರ್ಜುನವನ್ನು ರವಿಚಂದ್ರ ಕನ್ನಡಿಕಟ್ಟೆ(ಭಾಗವತರು), ರವಿರಾಜ್ ಜೈನ್( ಚೆಂಡೆ), ಕೌಶಲ್ ರಾವ್ ಪುತ್ತಿಗೆ( ಮದ್ದಲೆ), ಸುಣ್ಣಂಬಳ ವಿಶ್ವೇಶ್ವರ ಭಟ್( ಭೀಷ್ಮ), ಹಿರಣ್ಯ ವೆಂಕಟೇಶ್ ಭಟ್( ಶ್ರೀಕೃಷ್ಣ) ಹಾಗೂ ಡಾ.ಪ್ರಭಾತ್ ಬಲ್ನಾಡ್( ಅರ್ಜುನ) ನಡೆಸಿಕೊಟ್ಟರು.
ಮೂಡುಬಿದಿರೆ ಜೈನಮಠದಲ್ಲಿ ಸರಣಿ ತಾಳಮದ್ದಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ, ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಕಾರ್ಯಕ್ರಮದ ಸಂಯೋಜಕ ಶಾಂತರಾಮ ಕುಡ್ವ ಮತ್ತಿತರರಿದ್ದರು.