ಢಾಕಾ: ಬಾಂಗ್ಲಾದೇಶದ ರಾಜಧಾನಿಯಲ್ಲಿನ ಏಳು ಅಂತಸ್ತಿನ ವಾಣಿಜ್ಯ ಬಳಕೆಯ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 44 ಮೃತಪಟ್ಟಿದ್ದಾರೆ. ಸುಮಾರು 25 ಜನರು ಗಾಯಗೊಂಡಿದ್ದಾರೆ.
ಗ್ರೀನ್ ಕೊಝಿ ಕಾಟೇಜ್ ಕಟ್ಟಡದಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು, ಬೃಹತ್ ಅಗ್ನಿ ಜ್ವಾಲೆಗಳು ಸಮೀಪದ ಕಟ್ಟಡಗಳಿಗೂ ವ್ಯಾಪಿಸಿದವು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಬೆಳಗ್ಗೆವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದುವರಿಯಿತು. “ ಕಟ್ಟಡದಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ನಲ್ಲಿನ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿರುವ ಅನುಮಾನವಿದೆ. ಕಟ್ಟಡಕ್ಕೆ ಒಂದೇ ನಿರ್ಗಮನ ದ್ವಾರ ಇದ್ದ ಕಾರಣ ಹಲವರು ಉಸಿರುಗಟ್ಟಿ ಮೃತರಾಗಿದ್ದಾರೆ,” ಎಂದು ಐಜಿಪಿ ಚೌಧರಿ ಅಬ್ದುಲ್ಲಾ ಅಲ್ ಮಾಮುನ್ ತಿಳಿಸಿದ್ದಾರೆ.