Monday, December 2, 2024
Homeಮಂಗಳೂರುತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯಕ್ಕೆ ಮನ್ನಣೆ

ತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯಕ್ಕೆ ಮನ್ನಣೆ

ಮಂಗಳೂರು : ರಂಗಭೂಮಿ ಕಲಾವಿದನಿಗೆ ತನ್ನ ವೃತ್ತಿಯಲ್ಲಿ ನಿಷ್ಠೆ,ಭಕ್ತಿ ಇದ್ದರೆ ಜೀವನ ನಿರ್ವಹಣೆಗೆ ಯಾವುದೇ ಕೊರತೆ ಉಂಟಾಗದು. ಕಲಾವಿದನಲ್ಲಿ ಸಮಾಜ ಪ್ರಜ್ಞೆ ಅಗತ್ಯ . ತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರು ಕೂಡಾ  ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತುಳು ನಾಟಕಗಳು ತೋರಿಸಿಕೊಟ್ಟಿವೆ ಎಂದು ಜನಪ್ರಿಯ  ನಟ ಅರವಿಂದ ಬೋಳಾರ್ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಅದನ್ನು ವೃತ್ತಿ ಜೀವನದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನ ತರಲು ಪ್ರಯತ್ನಿಸುತ್ತೇನೆ ಎಂದರು.
ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಹುಚ್ಚನ ಪಾತ್ರ ಮಾಡಿ ಪ್ರಥಮ ಸ್ಥಾನ ಪಡೆದೆ. ಬಡತನದ ಕಾರಣ ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಶಾರದಾ ಮಾತೆ ನನ್ನ ಕೈ ಬಿಡಲಿಲ್ಲ. ಹೊಟ್ಟೆಪಾಡಿಗೆ ಹಲವು ಕೆಲಸ ಮಾಡಿದೆ. ಸ್ಥಳೀಯ ದೇವಾಲಯಗಳಲ್ಲಿ ನಡೆಯುವ ನಾಟಕಗಳಲ್ಲಿ ಹಾಸ್ಯ ಪಾತ್ರ  ಮಾಡುತ್ತಿದ್ದೆ.  ಬಳಿಕ ಹಾಸ್ಯ ಪಾತ್ರ ನನ್ನ ಜೀವನದಲ್ಲಿ ಹಾಸುಹೊಕ್ಕಾಯಿತು. ರಂಗಭೂಮಿಯ ಮೇಲಿನ ಆಸಕ್ತಿ, ಗುರುಗಳ ಹಾಗೂ ಪ್ರೇಕ್ಷಕರ ಆಶೀರ್ವಾದ ನನ್ನನ್ನು ಎತ್ತರಕ್ಕೆ ಬೆಳೆಸಿತು. ದೇವದಾಸ್ ಕಾಪಿಕಾಡ್ ಅವರ ತಂಡಕ್ಕೆ ಸೇರ್ಪಡೆಯಾದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದೆ. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರಿಂದ ತುಳು ಸಿನಿಮಾ ಪ್ರವೇಶಿಸಿ ಅಲ್ಲಿಯೂ ಒಳ್ಳೆಯ ಅವಕಾಶ ಪಡೆದೆ ಎಂದು ಅವರು ಹೇಳಿದರು.
ಯಕ್ಷಗಾನ, ಟಿ.ವಿ.ಕಾರ್ಯಕ್ರಮಗಳಲ್ಲೂ ಬೇಡಿಕೆಯ ನಟನಾದೆ. ಇದು ನನ್ನ ಭಾಗ್ಯ. ರಂಗಭೂಮಿ ನನಗೆ ಎಲ್ಲವನ್ನೂ ನೀಡಿದೆ. ಅನ್ನದ ದಾರಿ, ಸಂಪಾದನೆ ,ಉತ್ತಮ ಹೆಸರು, ಸ್ವಂತ ಮನೆ, ಮಕ್ಕಳಿಗೆ ಶಿಕ್ಷಣ ಎಲ್ಲವೂ ರಂಗಭೂಮಿಯಿಂದ ಸಾಧ್ಯವಾಗಿದೆ .ಮುಂದಿನ ಜನ್ಮ
ಇದ್ದರೆ ರಂಗಭೂಮಿ ಕಲಾವಿದನಾಗಿಯೇ ಜನಿಸಬೇಕು ಎಂಬ ಬಯಕೆ. ಜನರ ಪ್ರೀತಿ ನನಗೆ ಸಿಕ್ಕಿದ್ದು, ಅದುವೇ ನನ್ನನ್ನು ಇಷ್ಟು
ಎತ್ತರಕ್ಕೆ ಬೆಳೆಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ  ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್  ಮಾತನಾಡಿ, ತುಳು ರಂಗಭೂಮಿ ಕಟ್ಟಲು ಅನೇಕರ ತ್ಯಾಗ, ಪರಿಶ್ರಮ ಇದೆ. ತುಳು ರಂಗಭೂಮಿ ತುಳು ಭಾಷೆಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡಿದೆ.ತುಳು ರಂಗ ಭೂಮಿಗೆ ಅರವಿಂದ ಬೋಳಾರ್ ಅವರ ಕೊಡುಗೆ ಅನನ್ಯ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್  ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್  ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , ಕಾರ್ಯಕ್ರಮ ಸಂಯೋಜಕ ಸತೀಶ್ ಇರಾ  ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್   ಉಪಾಧ್ಯಕ್ಷ ಮಹಮ್ಮದ್ ಆರಿಫ್ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.
ವಿದೇಶಕ್ಕೆ ಬೋಳಾರ್
ಅರವಿಂದ ಬೋಳಾರ್ ಅವರು ನ.6ರಿಂದ ಆಸ್ಟ್ರೇಲಿಯಾ, ಡಿ.5ರಿಂದ ನೈಜೀರಿಯಾದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ
ಭಾಗವಹಿಸಲಿದ್ದಾರೆ .ಅಮೆರಿಕಾ ಇಂಗ್ಲೆಂಡ್ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ಸಂಘಟಕರು ಮಾತುಕತೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular