ಕಲಬುರ್ಗಿ: ಗಂಡನ ಜೊತೆ ಜಗಳ ಆದಾಗಲೆಲ್ಲಾ ಮಕ್ಕಳಿಗೆ ಹೊಡೆಯುತ್ತಿದ್ದ ಪತ್ನಿ ಈ ಬಾರಿ ಜ್ಯೂಸ್ ಬಾಟಲಿಯಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಗೀತಾಬಾಯಿ ಸಂತೋಷ್ ರಾಠೋಡ್ (30) ಮಕ್ಕಳಾದ ಚೈತನ್ಯ (4) ಧನುಷ್ (3) ಲಕ್ಷ್ಮಿಗೆ (ಒಂದುವರೆ ತಿಂಗಳು) ವಿಷ ಕುಡಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಗಂಡನ ಮೇಲಿನ ಸಿಟ್ಟಿಗೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕವನ್ನು ಜ್ಯೂಸ್ ಬಾಟಲಿಯಲ್ಲಿ ಬೆರೆಸಿ ಗೀತಾಬಾಯಿ ಆತ್ಮಹತ್ಯಗೆ ಯತ್ನಿಸಿದ್ದು, ಒಂದೂವರೆ ತಿಂಗಳ ಹಸುಗೂಸು ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ.
ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜಗಳ ಆದಾಗಲೆಲ್ಲಾ ಮಕ್ಕಳ ಮೇಲೆ ಗೀತಾಬಾಯಿ ಹಲ್ಲೆ ಮಾಡುತ್ತಿದ್ದಳು. ಆಗ ಮಕ್ಕಳಿಗೆ ಯಾಕೆ ಹೊಡಿತಿಯಾ ಎಂದು ಪತಿ ತಡೆಯುತ್ತಿದ್ದ. ಭಾನುವಾರ ಸಹ ಇದೇ ರೀತಿ ದಂಪತಿ ಮಧ್ಯೆ ಜಗಳ ಆಗಿದೆ.
ಜಗಳ ಆದ ನಂತರ ಪತಿ ಸಂತೋಷ್ ಹೊರಗೆ ಕೆಲಸದ ಮೇಲೆ ಹೋದ ನಂತರ ಗೀತಾ ಗಂಡನ ಮೇಲಿನ ಸಿಟ್ಟಿನಿಂದ ಮಕ್ಕಳಿಗೆ ಜ್ಯೂಸ್ ಬಾಟಲಿಯಲ್ಲಿ ಬೆಳೆಗಳಿಗೆ ಹಾಕಲು ತಂದಿದ್ದ ಕ್ರಿಮಿನಾಶಕವನ್ನು ಹಾಕಿ ಕುಡಿಸಿ, ತಾನೂ ಕುಡಿದಿದ್ದಾಳೆ.
ವಿಷ ಕುಡಿದ ಬಳಿಕ ಹೊಟ್ಟೆ ನೋವಿನಿಂದ ಮಕ್ಕಳು ಚೀರಾಡ ತೊಡಗಿದ್ದಾರೆ. ಇದನ್ನು ಗಮನಿಸಿದ ನೆರೆಹೊರೆಯ ಮಂದಿ ಧಾವಿಸಿದಾಗ ವಿಷಪ್ರಾಶನವಾಗಿರುದು ತಿಳಿದು ಕೂಡಲೇ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಘಟನೆಯ ಮಾಹಿತಿಯನ್ನು ಪತಿ ಸಂತೋಷನಿಗೆ ಮಾಹಿತಿ ತಲುಪಿಸಿ ತಾಯಿ-ಮಕ್ಕಳನ್ನು ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ಬೀದರ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.