ಮಂಗಳೂರು: ಬಾವಿಯಿಂದ ನೀರು ಸೇದುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ನಡೆದಿದೆ. ಆಯ ತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಬಿಕರ್ನಕಟ್ಟೆ ನಿವಾಸಿ, 58ರ ಹರೆಯದ ಟ್ರೆಸ್ಸಿ ಡಿಸೋಜಾ ಬಾವಿಗೆ ಬಿದ್ದಿದ್ದರು. ಸಂಜೆ ವೇಳೆ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ತಲೆ ಸುತ್ತು ಬಂದು ಬಾವಿಗೆ ಬಿದ್ದಿದ್ದಾರೆ. ಕೂಡಲೇ ಆಕೆಯ ಕುಟುಂಬಸ್ಥರು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿ ಅವರನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಾವಿಗೆ ಅಳವಡಿಸಲಾಗಿದ್ದ ಪಂಪಿನ ಹಗ್ಗವನ್ನು ಹಿಡಿದಿದ್ದರಿಂದ ಮಹಿಳೆ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಬಾವಿಯಲ್ಲಿ ಎಂಟು ಅಡಿಗೂ ಹೆಚ್ಚು ನೀರು ಇದೆ ಎನ್ನಲಾಗಿದೆ.