ಬೆಂಗಳೂರು:ಯಾರಬ್ ನಗರದ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಗಂಡು ಮಗುವನ್ನು ಬೆಂಗಳೂರಿನ ಮಹಿಳೆಯೊಬ್ಬರಿಗೆ 1.50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾಳೆ.
ಈ ಕುರಿತು ಮಹಿಳೆಯ ಪತಿ ಸದ್ಧಾಂ ಪಾಷಾ ನೀಡಿದ ದೂರಿನ ಮೇರೆಗೆ ರಾಮನಗರ ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೇಸ್ ದಾಖಲಿಸಿಕೊಂಡ ಪೊಲೀಸರು, ಮಗುವಿನ ತಾಯಿ ನಸೀನ್ ತಾಜ್, ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಸ್ಲಂ, ಬೆಂಗಳೂರಿನ ತಾರನಂ ಸುಲ್ತಾನ ಹಾಗೂ ಮಗು ಖರೀದಿಸಿದ ಶಾಜಿಯಾ ಬಾನುವನ್ನು ಬಂಧಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದ ಮತೋರ್ವ ಆರೋಪಿ ಫೂಲ್‌ಬಾಗ್‌ನ ಫಾಹಿಮಾ ತಲೆಮರೆಸಿಕೊಂಡಿದ್ದಾಳೆ. ಇತ್ತ ತಿಂಗಳ ಮಗುವನ್ನು ವಶಕ್ಕೆ ಪಡೆದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ.
ನಡೆದಿದ್ದೇನು.?: ಆರು ವರ್ಷದ ಹಿಂದೆ ಸದ್ದಾಂ ಪಾಷಾ ಅವರು ಜಿಯಾವುಲ್ಲಾ ಬ್ಲಾಕ್ ನಸೀನ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಐದು ವರ್ಷದ ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಈ ಪೈಕಿ ಮೊಹಮ್ಮದ್ ತಿಂಗಳ ಹಿಂದೆ ಜನಿಸಿದ್ದ. ಸದ್ದಾಂ ಫಿಲೇಚರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮೂಲಕ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ಕುಟುಂಬ ನಿರ್ವಹಣೆಗೆ ಪತಿ ಎದುರಿಸುತ್ತಿದ್ದ ಕಷ್ಟ ನೋಡಿ ಮರುಗುತ್ತಿದ್ದ ನಸೀನ್, ನೀವು ಒಬ್ಬರೇ ಕೆಲಸ ಮಾಡಿ ನಾಲ್ಕು ಮಕ್ಕಳನ್ನು ಸಾಕಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಒಂದು ಮಗುವನ್ನು ಮಾರಾಟ ಮಾಡಿ ನಮ್ಮ ಕಷ್ಟಗಳನ್ನು ತೀರಿಸಿಕೊಳ್ಳೋಣ ಎಂದು ಪತಿಗೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಒಪ್ಪದ ಸದ್ದಾಂ, ಏನೇ ಕಷ್ಟ ಬಂದರೂ ಮಗು ಮಾರುವುದು ಬೇಡ. ನಾವೇ ನೋಡಿಕೊಳ್ಳೋಣ ಎಂದು ಹೇಳಿದ್ದರು. ಈ ನಡುವೆ ನಸೀನ್ ತನ್ನ ಮಗುವನ್ನು ಮಾರಾಟ ಮಾಡಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ತಾರನಂ ಸಂಬಂಧಿ ಶಾಜಿಯಾ ಅವರಿಗೆ 1.50 ಲಕ್ಷ ರೂ.ಗಳಿಗೆ ಮಗು ಮಾರಾಟ ಮಾಡಿರುವ ವಿಷಯ ಬಾಯಿಬಿಟ್ಟಿದ್ದಾಳೆ.