ಮೈಸೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಕವನ ಬರೆದಿದ್ದಕ್ಕಾಗಿ ಯುವಕನೊಬ್ಬನ ಮೇಲೆ ಮುಸ್ಲಿಂ ಯುವಕರದ್ದೆನ್ನಲಾದ ಗುಂಪೊಂದು ಹಲ್ಲೆ ನಡೆಸಿದೆ ಎಂದು ವರದಿಯೊಂದು ತಿಳಿಸಿದೆ. ಮೈಸೂರಿನ ಅತಿಥಿ ಗೃಹದ ಬಳಿ ಈ ಘಟನೆ ನಡೆದಿದೆ. ರೋಹಿತ್ ಎಂಬವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸರ್ಕಾರಿ ಅತಿಥಿ ಗೃಹದ ಬಳಿ ತನ್ನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ರೋಹಿತ್ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆಯ ವೇಳೆ ಪಾಕಿಸ್ತಾನ ಪರ ಹಾಗೂ ಅಲ್ಲಾಹು ಪರ ಘೋಷಣೆ ಕೂಗುವಂತೆ ಒತ್ತಾಯಿಸಲಾಗಿತ್ತು. ಮೋದಿ ಪರ ಹಾಡು ಬರೆದಿದ್ದೀಯಾ ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎಂದು ರೋಹಿತ್ ದೂರು ನೀಡಿದ್ದಾರೆ. ಹಲ್ಲೆಯ ವೇಳೆ ತನ್ನ ಬಟ್ಟೆ ಹರಿದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.