ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿ ವಾಟ್ಸ್ ಆಯಪ್ ನಲ್ಲಿ ಮೆಸೇಜ್ ಮಾಡಿದ್ದಕ್ಕಾಗಿ ಮೆಡಿಕಲ್ ಮಾಲೀಕನಿಗೆ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ದೇರಳಕಟ್ಟೆಯಲ್ಲಿ ರವಿವಾರ ನಡೆದಿರುವುದು ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದವರನ್ನು ದೇರಳಕಟ್ಟೆಯ ಮೆಡಿಕಲ್ ಶಾಪ್ ಮಾಲಕ ಅಬ್ದುಲ್ ಜಲೀಲ್ ಎಂದು ಗುರುತಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಯುವಕನೊಬ್ಬ ಇತ್ತೀಚೆಗೆ ಮಂಗಳೂರಿನ ಬಂದರ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೈದಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಅಬ್ದುಲ್ ಜಲೀಲ್ ವಾಟ್ಸ್ ಆಯಪ್ ಮೂಲಕ ವೈಯಕ್ತಿಕವಾಗಿ ಮೆಸೇಜ್ ಕಳುಹಿಸಿದ್ದನ್ನು ಆಕ್ಷೇಪಿಸಿ ಮೃತ ಯುವಕನ ಕಡೆಯವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಆರಂಭದಲ್ಲಿ ಯುವಕನ ಕಡೆಯವರು ಜಲೀಲ್‌ಗೆ ಕರೆ ಮಾಡಿ ತರಾಟೆಗೈದಿದ್ದಾರೆ. ಈ ವೇಳೆ ಅಬ್ದುಲ್ ಜಲೀಲ್ ಕ್ಷಮೆ ಯಾಚಿಸಿದ್ದರು ಎನ್ನಲಾಗಿದೆ. ಅದಾಗ್ಯೂ ಯುವಕನ ಕಡೆಯವರೆನ್ನಲಾದ 11 ಮಂದಿಯ ತಂಡ ರವಿವಾರ ಬೆಳಗ್ಗೆ ಮೂರು ಕಾರುಗಳಲ್ಲಿ ದೇರಳಕಟ್ಟೆಗೆ ಆಗಮಿಸಿ ಜಲೀಲ್ ಗೆ ಹಲ್ಲೆಗೈದಿದ್ದಾರೆ. ಬಳಿಕ ಬಲವಂತವಾಗಿ ಕಾರಿನಲ್ಲಿ ಕರೆದಯೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ದಾರಿಮಧ್ಯೆ ಇನ್ನೊಂದು ಕಾರಿನಲ್ಲಿ ಕರೆದೊಯ್ದು ಅಲ್ಲೂ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿದ್ದಾರೆ. ಮುಜೀಬ್ ಎಂಬಾತ ಸೇರಿದಂತೆ ಏಳು ಮಂದಿ ಹಲ್ಲೆ ನಡೆಸಿದ್ದು, ತನ್ನ ಬಳಿಯಿದ್ದ 23,800 ರೂ. ನಗದು ಲಪಟಾಯಿಸಿದ್ದಾರೆ ಎಂದು ಹಲ್ಲೆಗೊಳಗಾದ ಜಲೀಲ್ ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.