ಉಡುಪಿ: ಮನೆ ಬಿಟ್ಟು ತೆರಳಿದ್ದ ವ್ಯಕ್ತಿ ಸುಮಾರು 28 ವರ್ಷಗಳ ಬಳಿಕ ಮರಳಿ ಬಂದು ತಂದೆ ತಾಯಿಯನ್ನು ಭೇಟಿಯಾಗಿರುವ ಅಪರೂಪದ ವಿದ್ಯಮಾನ ಉಡುಪಿ ಜಿಲ್ಲೆಯ ಹೆಬ್ರಿ ವರಂಗ ಗ್ರಾಮದಲ್ಲಿ ನಡೆದಿದೆ.
ತಂದೆ, ತಾಯಿ ಹಾಗೂ ಮಗನ ಈ ಅಪೂರ್ವ ಸಮಾಗಮಕ್ಕೆ ಕೋಟಿ ಚೆನ್ನಯ ದೈವಗಳ ಅಭಯವೇ ಕಾರಣ ಎಂದು ಸ್ಥಳೀಯರು ನಂಬಿದ್ದು, ಸಿನಿಮೀಯ ರೀತಿಯ ಈ ಘಟನೆಯಿಂದ ದೈವದ ಕಾರಣಿಕದ ಬಗ್ಗೆ ಇದೀಗ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ.
ಹೊಸಬೆಟ್ಟು ನಿವಾಸಿಗಳಾದ ಸುಂದರ ಪೂಜಾರಿ ಹಾಗೂ ಸುಶೀಲ ದಂಪತಿ ಪುತ್ರ ಭೋಜ 28 ವರ್ಷದ ಹಿಂದೆ ತಂದೆಯ ಜೊತೆಗಿನ ಮನಸ್ತಾಪದ ಹಿನ್ನಲೆ ಮನೆ ತೊರೆದಿದ್ದ. ನಂತರ ಹುಬ್ಬಳ್ಳಿಯ ಹೊಟೇಲೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಆದರೆ, ಮಗ ಎಲ್ಲಿಗೆ ಹೋಗಿದ್ದಾನೆ ಹಾಗೂ ಏನಾಗಿದ್ದಾನೆ ಎಂಬುದನ್ನು ತಿಳಿಯದ ಸುಂದರ ಪೂಜಾರಿ ಹಾಗೂ ಸುಶೀಲ ದಂಪತಿ ನಿತ್ಯವೂ ಮಗ ವಾಪಸ್ ಬಂದಾನು ಎಂಬ ನಿರೀಕ್ಷೆಯಲ್ಲಿಯೇ ಇದ್ದರು.
ಆದರೆ, ಮಗ ಮನೆ ಬಿಟ್ಟು ತೆರಳಿ ಎರಡು ದಶಕವೇ ಕಳೆದರೂ ವಾಪಸಾಗದೇ ಇದ್ದರೂ ದಂಪತಿ ಆತ ಬರಬಹುದು ಎಂಬ ನಿರೀಕ್ಷೆಯಲ್ಲೇ ಕುಳಿತಿದ್ದರು. ಕೊನೆಗೆ, ಜೀವನದ ಕೊನೆಯ ಕಾಲದಲ್ಲಾದರೂ ಮಗನನ್ನು ಕಾಣಬೇಕೆಂಬ ಇಂಗಿತದಿಂದ ದೈವಗಳ ಮೊರೆ ಹೋಗಿದ್ದರು. ತಾವು ಚಾಕಿರಿ ಮಾಡುವ ಕೋಟಿ ಚೆನ್ನಯರ ಬಳಿ ಪ್ರಾರ್ಥಿಸಿದ್ದರು.
ಆ ಸಂದರ್ಭದಲ್ಲಿ, ‘‘ಒಂದು ವರ್ಷದೊಳಗೆ ಮಗನ ಮುಖ ನೋಡುವಂತೆ ಮಾಡುತ್ತೇವೆ’’ ಎಂದು ಕೋಟಿ ಚೆನ್ನಯ ದೈವಗಳು ಅಭಯ ನೀಡಿದ್ದರು.
ಕೋಟಿ ಚೆನ್ನಯ ದೈವಗಳ ಮೊರೆ ಹೋದ ನಂತರ ಸುಮ್ಮನಿರದ ದಂಪತಿ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ವಿಡಿಯೋವೊಂದರ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದರು. ವಿಡಿಯೋ ವೈರಲ್ ಆಗಿದ್ದು, ಅದನ್ನು ಹುಬ್ಬಳ್ಳಿಯಲ್ಲಿದ್ದ ಭೋಜನೂ ನೋಡಿದ್ದಾನೆ. ಅದರ ಬೆನ್ನಲ್ಲೇ ಆತನ ಮನ ಕರಗಿದೆ. ಅಪ್ಪ – ಅಮ್ಮನನ್ನು ನೋಡಲೆಂದು ಹುಬ್ಬಳ್ಳಿಯಿಂದ ಓಡೋಡಿ ಬಂದಿದ್ದಾನೆ. ಊರಿಗೆ ಬಂದು ಹೆತ್ತ ತಂದೆ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾನೆ. ಬಾಲ್ಯದಲ್ಲಿ ಮಗನ ಕೈಯಲ್ಲಿದ್ದ ಗುಳ್ಳೆಯ ಆಧಾರದಲ್ಲಿ ಹೆತ್ತ ತಂದೆ ತಾಯಿ ಆತನ ಗುರುತು ಹಿಡಿದಿದ್ದು, ಭಾವುಕರಾಗಿದ್ದಾರೆ.
ತಂದೆ- ತಾಯಿ ಜೊತೆ ಸಮಯ ಕಳೆದು ಭೋಜ ಮರಳಿ ಹುಬ್ಬಳಿಗೆ ತೆರಳಿದ್ದ. ಇದಾಗಿ ವಾರ ಕಳೆಯುವಷ್ಟರಲ್ಲಿ ಮಗನ ಕಂಡ ಸಂತೃಪ್ತಿಯೊಂದಿಗೆ ತಾಯಿ ಸುಶೀಲ ಕೊನೆಯುಸಿರೆಳೆದಿದ್ದಾರೆ.