ಬಸ್ ಚಾಲಕನ ಚಾಣಾಕ್ಷತನ, ಧೈರ್ಯದ ನಿರ್ಧಾರದಿಂದಾಗಿ ದುರಂತವೊಂದು ತಪ್ಪಿ ಬಸ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕಂಕನಾಡಿಯಿಂದ ಆಕಾಶಭವನಕ್ಕೆ ತೆರಳುವ 60 ಸಂಖ್ಯೆಯ ಸಿಟಿ ಬಸ್ ಶನಿವಾರ ಬೆಳಗ್ಗೆ 8.45ರ ಸುಮಾರಿಗೆ ಕೊಂಚಾಡಿ ವಿದ್ಯಾ ಶಾಲೆ ಬಳಿಯ ತಗ್ಗಾದ ರಸ್ತೆ ತಲುಪುವ ಕೆಲವೇ ಕ್ಷಣಗಳ ಮೊದಲು ಬಸ್‌ನ ಬ್ರೇಕ್‌ನಲ್ಲಿ ಸಮಸ್ಯೆ ಉಂಟಾಯಿತು.
ಚಾಲಕ ಗ್ಲೆನ್ ಸಿಕ್ವೇರಾ ಬ್ರೇಕ್ ಪೆಡಲ್ ಅನ್ನು ಎಷ್ಟು ಬಲವಾಗಿ ತುಳಿದರೂ ಬ್ರೇಕ್ ಹಿಡಿಯಲಿಲ್ಲ. ಕೂಡಲೇ ಹೇಗಾದರೂ ಬಸ್ ಅನ್ನು ನಿಲ್ಲಿಸಲೇಬೇಕೆಂದು ಧೈರ್ಯ ಮಾಡಿದ ಅವರು ರಸ್ತೆ ಬದಿ ಪಾರ್ಕ್ ಮಾಡಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ ನಿಲ್ಲಿಸುವ ಯತ್ನ ನಡೆ ಸಿದರು. ಆದರೂ ಬಸ್ ನಿಲ್ಲಲಿಲ್ಲ.
ಅಷ್ಟರಲ್ಲೇ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಬೊಬ್ಬೆ ಹಾಕಲು ಆರಂಭಿಸಿದರು. ಧೈರ್ಯ ಕಳೆದುಕೊಳ್ಳದ ಗ್ಲೆನ್ ಬಸ್ ಅನ್ನು ಮತ್ತೆ ಬಲಕ್ಕೆ ತಿರುಗಿಸಿ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಲ್ಲಿಸಲು ಯತ್ನಿಸಿದರು. ಈ ನಡುವೆ ಹಂಪ್ಸ್ ಮೇಲೆಯೂ ಬಸ್ ಹಾಯಿಸಿದರು. ಕೊನೆಗೆ ಬಸ್ ಡಿವೈಡರ್‌ಗೆ ಢಿಕ್ಕಿ ಹೊಡೆದು ನಿಂತಿತು. ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.