ಪಡುಬಿದ್ರಿ: ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ಎರ್ಮಾಳು ನೇರಳ್ತಾಯ ಗುಡಿಯ ಬಳಿ ನಿಯಂತ್ರಣ ತಪ್ಪಿ ಸುಮಾರು 8 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ವೇಳೆ ಮಳೆಯನ್ನೂ ಲೆಕ್ಕಿಸದೆ ಎರ್ಮಾಳು ಅಟೋ ರಿಕ್ಷಾ ಚಾಲಕರು ಕಾರಿನಲ್ಲಿದ್ದ ವ್ಯಕ್ತಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಳೆ ಬರುತ್ತಿರುವ ನಡುವೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ಬಂದ ಕಾರು ಕಂದಕಕ್ಕೆ ಉರುಳಿದೆ. ಕಾರಿನಲ್ಲಿ ಚಾಲಕ ಮಾತ್ರ ಪ್ರಯಾಣಿಸುತ್ತಿದ್ದರು. ಗಾಳಿ ಚೀಲ ಒಡೆದ ಕಾರಣ ಚಾಲಕನಿಗೆ ಗಂಭೀರ ಗಾಯಗಳಾಗುವುದು ತಪ್ಪಿದೆ. ಆದರೆ ಕಾರಿನಿಂದ ಹೊರ ಬರಲಾಗದೆ ಸಂಕಷ್ಟಕ್ಕೆ ಸಿಲುಕಿದ ಚಾಲಕನನ್ನು ಅಟೋ ಚಾಲಕರು ಹೊರತೆಗೆದು ಆಂಬುಲೆನ್ಸ್ ಮೂಲಕ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬಳಿಕ ಕಾರನ್ನು ಹೆಜಮಾಡಿ ಟೋಲ್ ಸಿಬ್ಬಂದಿ ಮೇಲೆತ್ತಿ ಪಡುಬಿದ್ರಿ ಪೊಲೀಸ್ ಠಾಣೆಗೆ ಸಾಗಿಸುವ ಕಾರ್ಯ ನಡೆಸಿದ್ದಾರೆ.