ಭೋಪಾಲ್: ಅಕ್ರಮ ಗೋಮಾಂಸ ಮಾರಾಟದ ವಿರುದ್ಧದ ಕ್ರಮದ ಭಾಗವಾಗಿ ಮಧ್ಯಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 11 ಮನೆಗಳನ್ನು ಸ್ಥಳೀಯ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಮಂಡ್ಲಾದ ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಗೋವುಗಳನ್ನು ಕೂಡಿಹಾಕಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ಹೇಳಿದ್ದಾರೆ.
ಮಾಹಿತಿ ಸಿಕ್ಕ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಹಿತ್ತಲಲ್ಲಿ ಕಟ್ಟಿ ಹಾಕಲಾಗಿದ್ದ 150 ಗೋವುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಮನೆಗಳಲ್ಲಿ ಫ್ರಿಜ್‌ನಲ್ಲಿಟ್ಟಿದ್ದ ಗೋಮಾಂಸವನ್ನೂ ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಗಳ ಕೊಬ್ಬು, ದನದ ಚರ್ಮ ಮತ್ತು ಮೂಳೆಗಳನ್ನೂ ಕೊಠಡಿಯಲ್ಲಿ ಕೂಡಿಟ್ಟಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿರುವುದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ 10 ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ವಶಕ್ಕೆ ಪಡೆದ ಗೋವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.
